ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನೆರೆ ರಾಜ್ಯ ಮತ್ತು ವಿದೇಶಗಳಿಂದ ಯುವತಿಯರನ್ನು ಕರೆಸಿಕೊಂಡು ಸ್ಪಾ ಹಾಗೂ ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 6 ಮಂದಿಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಇಂದಿರಾನಗರದ ನಿರಂಜನ್ (35), ರೂಬಿ (30) ಮತ್ತು ಜೆ.ಪಿ.ನಗರದ ಶರೀಫ್ ಸಾಬ್(45) ಹಾಗೂ ರಾಜಶೇಖರ್(36) ಬಂಧಿತರು. ಈ ಎರಡೂಪ್ರಕರಣಗಳಲ್ಲಿ ರಾಜ್ಯ, ಹೊರರಾಜ್ಯ ಹಾಗೂ ವಿದೇಶದ 8 ಮಂದಿ ಯುವತಿಯರನ್ನು ರಕ್ಷಿಸಲಾಗಿದೆ.
ಆರೋಪಿಗಳಾದ ನಿರಂಜನ್ ಹಾಗೂ ರೂಬಿ ಇಂದಿರಾನಗರದ 100 ಅಡಿ ರಸ್ತೆಯ ನೆಸ್ಟ್ ಟು ಗ್ಲೇನ್ ಬೇಕ್ ಹೌಸ್ ಬಳಿ ಐರಾ ಸ್ಪಾ ಮತ್ತು ವೆಲ್‌ನೆಸ್ ಸೆಂಟರ್ ತೆರೆದು ರಾಜ್ಯ ಹಾಗೂ ಹೊರರಾಜ್ಯದ ಯುವತಿಯರನ್ನು ಅಕ್ರಮವಾಗಿ ಇರಿಸಿಕೊಂಡು ಸ್ಪಾಗೆ ಬರುವ ಗಿರಾಕಿಗಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಗೆ ‘ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮ’ದ ಆಮಂತ್ರಣ ಪತ್ರಿಕೆ ನೀಡಿದ ಸಮಿತಿ
ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೂಂದು ಪ್ರಕರಣಗಳಲ್ಲಿ ಜೆ.ಪಿ.ನಗರ 5ನೇ ಹಂತದಲ್ಲಿ ರೂಹಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸ್ಪಾ ಮೇಲೆ ದಾಳಿ ಮಾಡಿ ಆರೋಪಿಗಳಾದ ಶರೀಫ್ ಸಾಬ್ ಮತ್ತು ರಾಜಶೇಖರ್ ಎಂಬುವರನ್ನು ಬಂಧಿಸಲಾಗಿದೆ.
ರಾಜ್ಯ ಮತ್ತು ವಿದೇಶದ ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದರು.