ಬೆಂಗಳೂರು: ಅಪನಗದೀಕರಣಗೊಂಡ ನೋಟು ವರ್ಗಾವಣೆ ಪ್ರಕರಣದ ಡೀಲ್‌ಗೆ ಸಂಬಂಧಿಸಿ ಗಣಿ ಧಣಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್‌ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಅವರು ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಕಮಿಷನರ್ ಹೇಳಿದ್ದೇನು?
ವಂಚಕ ಅಂಬಿಡೆಂಟ್ ಸಂಸ್ಥೆಯೊಂದಿಗೆ ಜನಾರ್ದನ ರೆಡ್ಡಿ 18 ಕೋಟಿ ರೂಪಾಯಿ ಹಣ ವರ್ಗಾವಣೆಗಾಗಿ ಅಂಬಿಕಾ ಜ್ಯುವೆಲ್ಲರ್ಸ್ ಮಾಲೀಕ ರಮೇಶ್ ಕೊಠಾರಿ ಎಂಬಾತನೊಂದಿಗೆ ಡೀಲ್ ಮಾಡಿದ್ದು, ಬಳ್ಳಾರಿಯ ತಾಜ್‌ಮಹಲ್ ಜ್ಯುವೆಲ್ಲರಿ ಮಾಲೀಕ ರಮೇಶ್ ಬಳ್ಳಾರಿಗೆ 57 ಕೆಜಿ ಚಿನ್ನದ ಗಟ್ಟಿ ರೂಪದಲ್ಲಿ ನೀಡಿದ್ದು ಅದನ್ನು ರೆಡ್ಡಿ ಆಪ್ತ ಅಲಿಖಾನ್‌ಗೆ ಕೊಟ್ಟಿರುವುದಾಗಿ ಇಡಿ ತನಿಖೆ ವೇಳೆ ತಿಳಿದು ಬಂದಿದೆ.
ಸಯ್ಯದ್ ಫರೀದ್, ಜನಾರ್ದನ ರೆಡ್ಡಿ, ಬ್ರಿಜೇಶ್ ರೆಡ್ಡಿ ಅವರು ಡೀಲ್‌ನಲ್ಲಿ ಭಾಗಿಯಾಗಿದ್ದು ತಾಜ್ ವೆಸ್ಟ್ ಎಂಡ್‌ನಲ್ಲಿ ಡೀಲ್ ನಡೆದಿದೆ ಎಂದು ತಿಳಿದು ಬಂದಿದೆ.
ರಮೇಶ್ ಹೇಳಿಕೆಯ ಮೇರೆಗೆ ರೆಡ್ಡಿ ಮತ್ತು ಅಲಿಖಾನ್ ಅವರನ್ನು ಹುಡುಕಾಟ ನಡೆಸುತ್ತಿರುವುದಾಗಿ ಕಮಿಷನರ್ ತಿಳಿಸಿದ್ದಾರೆ.
ನಾಲ್ಕು ತಂಡಗಳ ಕಾರ್ಯಾಚರಣೆ
ಸಿಸಿಬಿ ಯ ಅಲೋಕ್ ಕುಮಾರ್ ಮತ್ತು ಗಿರೀಶ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ನಾಲ್ಕು ತಂಡಗಳ ಮೂಲಕ ಜನಾರ್ದನ ರೆಡ್ಡಿ ಮತ್ತು ಅಲಿಖಾನ್ ಗಾಗಿ ಶೋಧ ನಡೆಸುತ್ತಿದ್ದಾರೆ.
ಈಗಾಗಲೆ ಫರೀದ್ ಮತ್ತು ಅಲಿಖಾನ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಬೆಂಗಳೂರಿನ ರೆಡ್ಡಿ ವಾಸವಿರುತ್ತಿದ್ದ ಪಾರಿಜಾತ ಅಪಾರ್ಟ್‌ಮೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾನೂನಿಗಿಂತ ದೊಡ್ಡದಲ್ಲ
ಈ ಪ್ರಕರಣದ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ, ರೆಡ್ಡಿ ಆಪ್ತ ಮಿತ್ರ ಶ್ರೀರಾಮುಲು ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ.ಕಾನೂನು ಅದರ ಕೆಲಸ ಮಾಡುತ್ತದೆ ಎಂದರು.