ಸಿರುಗುಪ್ಪ: ನಗರದ ಹೃದಯ ಭಾಗದಲ್ಲಿರುವ ಬಸ್‌ನಿಲ್ದಾಣದಲ್ಲಿ ನಿರಂತರವಾಗಿ ಕಳ್ಳತನಗಳು ನಡೆಯುತ್ತಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಬಸ್ ನಿಲ್ದಾಣ ಇನ್ನೂ ತಮ್ಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಆದ್ದರಿಂದ ಕ್ಯಾಮೆರಾ ಅಳವಡಿಸಲು ಬರುವುದಿಲ್ಲ ಎಂದು ಕುಂಟುನೆಪ ಹೇಳುತ್ತಿದ್ದಾರೆ.
ಬಸ್‌ನಿಲ್ದಾಣದ ಆಯಕಟ್ಟಿನ ಸ್ಥಳದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಿದರೆ ಕಳ್ಳರ ಚಲನವಲನಗಳನ್ನು ಗುರುತಿಸಲು ಮತ್ತು ನಿಲ್ದಾಣದಲ್ಲಿ ನಡೆಯುತ್ತಿರುವ ಕಳ್ಳತನಗಳನ್ನು ತಡೆಯಲು ಸಾಧ್ಯವಾಗುತ್ತದೆ. ಆದರೆ ಸಾರಿಗೆ ಇಲಾಖೆ ಅಧಿ ಕಾರಿಗಳು ಬಸ್‌ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಹರಾಜಿನ ಮೂಲಕ ಬಾಡಿಗೆಗೆ ನೀಡಿ ಹಣ ಪಡೆಯುತ್ತಿದ್ದಾರೆ.
ಆದರೆ ಸಿಸಿ ಕ್ಯಾಮೆರಾ ಅಳವಡಿಸಲು ಮಾತ್ರ ಇನ್ನೂ ಬಸ್‌ನಿಲ್ದಾಣ ನಮ್ಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಆದ್ದರಿಂದ ಸಿಸಿ ಕ್ಯಾಮೆರಾ ಅಳವಡಿಸಲು ಸಾಧ್ಯವಿಲ್ಲವೆನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬಸ್‌ನಿಲ್ದಾಣ ಇನ್ನೂ ಇಲಾಖೆಗೆ ಹಸ್ತಾಂತರವಾಗಿಲ್ಲದಿದ್ದರೂ ಮಳಿಗೆಗಳನ್ನು ಬಾಡಿಗೆಗೆ ನೀಡಲು ಅವಕಾಶ ಹೇಗೆ ಬಂತು? ಅದೇ ರೀತಿ ಸಿಸಿ ಕ್ಯಾಮೆರಾ ಅಳಡಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬಸ್‌ನಿಲ್ದಾಣದಲ್ಲಿರುವ ಮಹಿಳೆಯರ ವಿಶ್ರಾಂತಿ ಕೊಠಡಿ ಕೋರಿಯರ್ ಸರ್ವಿಸ್ ಕಚೇರಿಯಾಗಿ ಪರಿವರ್ತನೆಯಾಗಿದೆ. ಮಹಿಳೆಯರು ನಿಲ್ದಾಣದಲ್ಲಿಯೇ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ. ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದೆ ಬಹುತೇಕ ಪ್ರಯಾಣಿಕರು ನೆಲದ ಮೇಲೆಯೇ ಆಸೀನರಾಗಿ ಬಸ್ ಕಾಯುವ ಅವ್ಯವಸ್ಥೆ ಇಲ್ಲಿದೆ.
ನಗರದ ಬಸ್‌ನಿಲ್ದಾಣದಲ್ಲಿ ಹೆಚ್ಚೆಚ್ಚು ಕಳ್ಳತನ ನಡೆಯುತ್ತಿದ್ದರೂ ಇದನ್ನು ತಡೆಯಲು ಸಾರಿಗೆ ಇಲಾಖೆ ಅಧಿಕಾರಿಗಳು ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಒಬ್ಬ ಪೊಲೀಸ್ ಪೇದೆಯನ್ನು ನಿಯೋಜನೆ ಮಾಡಿಸಲು ಮುಂದಾಗಿಲ್ಲ. ಇದರಿಂದಾಗಿ ಪ್ರಯಾಣಿಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು.
∙ಎಂ. ದೊಡ್ಡಬಸಪ್ಪ, ಎಚ್.ಬಿ. ಗಂಗಪ್ಪ, ರವಿ ಆರ್. ಮುತ್ತೂರು, ಕೆ.ಜಿ.ನರಸಿಂಹುಲು, ಪ್ರಯಾಣಿಕರು
ಬಸ್‌ನಿಲ್ದಾಣವನ್ನು ನಮ್ಮ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಇದರಿಂದಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಸಾಧ್ಯವಾಗಿಲ್ಲ. ಪೊಲೀಸರನ್ನು ನಿಯೋಜಿಸುವಂತೆ ಪತ್ರ ವ್ಯವಹಾರ ಮಾಡಲಾಗಿದೆ. ∙
ಕೆ.ಎಂ. ತಿರುಮಲೇಶ, ಸಾರಿಗೆ ಘಟಕದ ವ್ಯವಸ್ಥಾಪಕ, ಸಿರುಗುಪ್ಪ
-ಆರ್. ಬಸವರೆಡ್ಡಿ ಕರೂರು