Advertisement

ನಂದಿಗುಡ್ಡೆಗೆ ಪಾಲಿಕೆಯಿಂದ ಸಿಸಿ ಕೆಮರಾ ಕಣ್ಗಾವಲು; ಕಸ ಎಸೆದರೆ ಜೋಕೆ

12:33 PM Jul 22, 2022 | Team Udayavani |

ನಂದಿಗುಡ್ಡೆ: ನಂದಿಗುಡ್ಡೆಯ ರಸ್ತೆ ಬದಿಯಲ್ಲಿ ಮನೆ, ಅಂಗಡಿಗಳ ತ್ಯಾಜ್ಯವನ್ನು ಎಸೆಯುವವರನ್ನು ಗುರುತಿಸಿ ಕಾನೂನು ಕ್ರಮ ಕೊಳ್ಳಲು ನೆರವಾಗುವ ಉದ್ದೇಶದಿಂದ ಮಹಾನಗರ ಪಾಲಿಕೆ ಸಿಸಿ ಕೆಮರ ಕಣ್ಗಾವಲು ಇರಿಸಿದೆ.

Advertisement

ನಂದಿಗುಡ್ಡೆಯ ಎರಡು ಭಾಗದಲ್ಲಿ ಕೆಮರಾ ಇರಿಸಲಾಗಿದ್ದು, ದೃಶ್ಯಾವಳಿಯ ಆಧಾರದಲ್ಲಿ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ನಂದಿಗುಡ್ಡೆ ರಸ್ತೆಯ ಮೇಲ್ಭಾಗ ಮತ್ತು ಮಧ್ಯ ಭಾಗದಲ್ಲಿ ಕೆಮರಾ ಕಣ್ಗಾವಲಿರಿಸಿ ನಿಗಾ ಇಡಲಾಗುತ್ತಿದೆ. ಪರಿಣಾಮ ಕಸ ಎಸೆಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಲ್ಲಿನ ಫೂಟೇಜ್‌ ಆಧಾರದಲ್ಲಿ ಆ ಮಾಹಿತಿಯನ್ನು ಪಾಂಡೇಶ್ವರ ಪೊಲೀಸ್‌ ಠಾಣೆಗೆ ನೀಡಲು ಮನಪಾ ಮುಂದಾಗಿದೆ. ಅದರಂತೆ ಕಸ ಎಸೆಯುವ ವ್ಯಕ್ತಿಯೊಬ್ಬರಿಗೆ ಗುರುವಾರವೂ ಪಾಲಿಕೆಯಿಂದ ದಂಡ ವಿಧಿಸಲಾಗಿದೆ.

ನಂದಿಗುಡ್ಡೆಯಲ್ಲಿ ತ್ಯಾಜ್ಯ ವಿನಿಮಯ ಮಾಡುವ ಪಾಲಿಕೆಯ ವಾಹನ ಕೂಡ ಇಲ್ಲೇ ನಿಲ್ಲುವುದರಿಂದ ಹಲವು ಮಂದಿ ಇಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದರು. ಪರಿಣಾಮವಾಗಿ ಈ ರಸ್ತೆ ತ್ಯಾಜ್ಯಮಯವಾಗಿ ಬದಲಾಗಿ ಸ್ಥಳೀಯವಾಗಿ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಅರಿವು ಮೂಡಿಸುವ ಪ್ರಯತ್ನವನ್ನು ನಡೆಸಲಾಯಿತು. ತ್ಯಾಜ್ಯ ಎಸೆಯುವವರನ್ನು ನಿಲ್ಲಿಸಿ ಅವರಿಗೆ ಮನವರಿಕೆ ಕೂಡ ಮಾಡಲಾಗಿತ್ತು. ಆದರೂ ಬ್ಲ್ಯಾಕ್‌ಸ್ಪಾಟ್‌ ನಿರ್ಮೂಲನೆ ಕಷ್ಟವಾಗಿತ್ತು. ಸದ್ಯ ಆ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮನಪಾ, ಪರಿಸರಾಸಕ್ತರು ಮುಂದಾಗಿದ್ದಾರೆ. ಅಲ್ಲಿ ಮಣ್ಣು ಹದ ಮಾಡಿ ರಸ್ತೆ ಬದಿ ಸ್ವಚ್ಛಗೊಳಿಸಲಾಗಿದೆ.

ಕಸ ಎಸೆದವರ ಪೊಟೊ/ವಿಡಿಯೋ ನೀಡಿದರೆ ಅವರಿಗೆ ಯುನೈಟೆಡ್‌ ನಂದಿಗುಡ್ಡೆ ಸ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಸಂಸ್ಥೆಯಿಂದ ಬಹುಮಾನ ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಬ್ಲ್ಯಾಕ್‌ಸ್ಪಾಟ್‌ ನಿರ್ಮೂಲನೆಗೆ ಕ್ರಮ ನಗರದ ಹಲವು ಕಡೆಗಳಲ್ಲಿ ಸಾರ್ವಜನಿಕರು ಕಸ ಎಸೆದು ಬ್ಲ್ಯಾಕ್‌ಸ್ಪಾಟ್‌ ನಿರ್ಮಾಣಗೊಂಡಿದೆ. ನಗರದ ನಂದಿಗುಡ್ಡೆಯಂತೆ ಇತರೆಡೆಯೂ ಸ್ವಚ್ಛತೆ ಪಾಲಿಕೆಗೆ ಸವಾಲಾಗಿದೆ ಪರಿಣಮಿಸಿದೆ.

ನಗರದ ಚಿಲಿಂಬಿ, ಕೊಟ್ಟಾರ, ಬಂದರು, ದಡ್ಡಲಕಾಡು, ಸ್ಟೇಟ್‌ಬ್ಯಾಂಕ್‌, ಅಳಕೆ ಸಹಿತ ವಿವಿಧ ಕಡೆಗಳಲ್ಲಿ ರಸ್ತೆ ಬದಿಯೇ ಕಸ ಬಿದ್ದಿದೆ. ಈ ಕುರಿತಂತೆ ಪಾಲಿಕೆ ಅಧಿಕಾರಿ ಶಬರಿನಾಥ್‌ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ “ನಗರದಲ್ಲಿ ಬ್ಲ್ಯಾಕ್‌ಸ್ಪಾಟ್‌ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ ಹಲವು ಕಡೆ ಸೋಲಾರ್‌ ಸಿಸಿ ಕೆಮರಾ ಅಳವಡಿಸಿ ಕಣ್ಗಾವಲು ಇಡಲಾಗಿದೆ. ಬ್ಲ್ಯಾಕ್‌ಸ್ಪಾಟ್‌ ಪ್ರದೇಶ ಸುಂದರಗೊಳಿಸಲಾಗುತ್ತಿದೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next