ಪುತ್ತೂರು : ನಗರದ ಆಯಕಟ್ಟಿನ ಸ್ಥಳಗಳಲ್ಲಿ ಕಣ್ಗಾವಲಿಗಾಗಿ ಪೊಲೀಸ್ ಹಾಗೂ ನಗರಸಭೆ ಸಹಕಾರ ದಲ್ಲಿ ಅಳವಡಿಸಿರುವ ಸಿಸಿ ಕೆಮರಾಗಳ ಪೈಕಿ ಬಹುತೇಕ ಕೆಟ್ಟು ಹೋಗಿದ್ದು ದುರಸ್ತಿ ಮಾಡುವಂತೆ ಪೊಲೀಸ್ ಇಲಾಖೆಯು ನಗರಸಭೆಗೆ ಪತ್ರ ಬರೆದಿದೆ. ಬೊಳುವಾರು, ದರ್ಬೆ, ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸಿಸಿ ಕೆಮರಾ ಅಳವಡಿಸಿದ್ದು ಹೆಚ್ಚಿನವು ನಿರ್ವಹಣೆ ಇಲ್ಲದೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಕಳ್ಳರ ಕರಾಮತ್ತು
ಸಿಸಿ ಕೆಮರಾ ಇಲ್ಲದ ಕಾರಣ ಕಳ್ಳರ ಕುರುಹು ಪತ್ತೆ ಹಚ್ಚುವುದು ಪೊಲೀಸರಿಗೆ ಹರ ಸಾಹಸವಾಗಿ ಪರಿಣಮಿಸಿದೆ. ರಾಜ್ಯ ಹೆದ್ದಾರಿಗಳಲ್ಲಿಯೂ ರಾತ್ರಿ ಹೊತ್ತಿನಲ್ಲಿ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಅಪರಿಚಿತ ವಾಹನಗಳು ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳಿಗೆ ಹಿಟ್‌ಆ್ಯಂಡ್ ರನ್ ಮಾಡಿ ಪಲಾಯನ ಮಾಡುವ ಘಟನೆಗಳೂ ಹೆಚ್ಚಾಗುತ್ತಿವೆ. ಆದರೆ ಈ ಕಡೆಗಳಲ್ಲೂ ಸಿಸಿ ಕೆಮರಾಗಳು ಕಾರ್ಯಾಚರಿಸದ ಕಾರಣ ಇಂಥಹ ಪ್ರಕರಣಗಳನ್ನೂ ಪತ್ತೆಹಚ್ಚುವುದು ಕಷ್ಟ ಸಾಧ್ಯವಾಗುತ್ತಿದೆ. ಇದೀಗ ಪುತ್ತೂರು ಜಾತ್ರೆಯು ಆರಂಭಗೊಂಡಿದ್ದು ಸುರಕ್ಷತೆ ದೃಷ್ಟಿಯಿಂದ ಸಿಸಿ ಕೆಮರಾದ ಅಗತ್ಯ ಇರುವುದರಿಂದ ನಗರಾಡಳಿತ ತತ್‌ಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಸ್ವಚ್ಛ ಪರಿಸರಕ್ಕೂ ಅನುಕೂಲ ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶಕ್ಕೂ ಸಿಸಿ ಕೆಮರಾಗಳನ್ನು ಬಳಸಲಾಗುತ್ತಿದ್ದು ಅಲ್ಲಲ್ಲಿ ಕಸ, ತ್ಯಾಜ್ಯ ಎಸೆಯುವ ಕಿಡಿ ಗೇಡಿಗಳನ್ನು ಪತ್ತೆ ಮಾಡಲು ಇದರ ದೃಶ್ಯಗಳು ಆಧಾರವಾಗಿದೆ. ಹಲವೆಡೆ ಕೈ ಕೊಟ್ಟಿರುವ ಕಾರಣ ಕಾರ್ಯಾಚರಣೆಗೂ ತೊಡಕು ಉಂಟಾಗಿದೆ.
ಶೀಘ್ರ ದುರಸ್ತಿ
ಸಾರ್ವಜನಿಕ ಸೇವೆಗೆ ಅನುಕೂಲವಾಗುವಂತೆ ನಗರಸಭೆ ವತಿಯಿಂದ ಅಳವಡಿಸಿರುವ ಸಿಸಿ ಕೆಮರಾಗಳ ದುರಸ್ತಿ, ನಿರ್ವಹಣೆ ಮತ್ತು ಹೊಸದಾಗಿ ಅಳವಡಿಸಿ ನಿರ್ವಹಿಸಲು ನಗರ ಠಾಣಾ ಪೊಲೀಸ್ ನಿರೀಕ್ಷಕರು ನಗರಸಭೆಗೆ ಪತ್ರ ಬರೆದಿದ್ದು ಅದರಂತೆ ದುರಸ್ತಿ ನಡೆಸಲು ನಿರ್ಧರಿಸಲಾಗಿದೆ.
–ಜೀವಂಧರ್ ಜೈನ್, ಅಧ್ಯಕ್ಷ, ನಗರಸಭೆ ಪುತ್ತೂರು
ಗಮನಕ್ಕೆ ತರಲಾಗಿದೆ
ನಗರದ 46 ಕಡೆಗಳಲ್ಲಿ ಸಿಸಿ ಕೆಮರಾ ಇದ್ದು ಅವುಗಳಲ್ಲಿ ಅಂದಾಜು 28 ಕೆಮರಾ ಹಾಳಾಗಿದೆ. ಇದರ ದುರಸ್ತಿಗಾಗಿ ನಗರಸಭೆಯ ಗಮನಕ್ಕೆ ತರಲಾಗಿದೆ.
–ರಾಜೇಶ್ ಕೆ.ವಿ., ಎಸ್‌ಐ, ನಗರ ಠಾಣೆ ಪುತ್ತೂರು