Advertisement

ಕಾಣಿಯೂರು ಪೇಟೆಗೆ ಸಿಸಿ ಕೆಮರಾ ಕಣ್ಗಾವಲು

06:40 AM Aug 04, 2017 | Team Udayavani |

ಸವಣೂರು: ಪುತ್ತೂರು ತಾಲೂಕಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಊರುಗಳಲ್ಲಿ ಒಂದಾದ ಕಾಣಿಯೂರು ಪೇಟೆಯ ಹಲವು ವರ್ಷಗಳ ಬೇಡಿಕೆಯಾದ ಸಿಸಿ ಕೆಮರಾ ಅಳವಡಿಕೆ ಕೊನೆಗೂ ಈಡೇರಿದೆ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮೂಲ ಮಠವೂ ಇಲ್ಲಿದೆ. ಹಲವು ವಿದ್ಯಾಸಂಸ್ಥೆಗಳು, ರಾಷ್ಟ್ರೀಯ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳು, ಅಂಚೆ ಕಚೇರಿ, ಅಡಿಕೆ ವ್ಯಾಪಾರದ ಅಂಗಡಿಗಳು ಅಲ್ಲದೆ ಹಲವು ವ್ಯಾಪಾರ ಅಂಗಡಿ ಮುಂಗಟ್ಟುಗಳನ್ನು ಹೊಂದಿ ಜನನಿಬಿಡವಾಗಿದ್ದು, ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.

Advertisement

ಹಲವು ಗ್ರಾಮಗಳಿಗೆ ಸಂಪರ್ಕ
ಕಾಣಿಯೂರು ಮುಖ್ಯ ಪೇಟೆಗೆ ಹಲವು ಗ್ರಾಮಗಳ ಸಂಪರ್ಕ ಇದೆ. ಸ್ಥಳೀಯ ಗ್ರಾಮಗಳಾದ ಚಾರ್ವಾಕ, ಮುದ್ವ, ನಾಣಿಲ, ದೋಳ್ಪಾಡಿ, ಪುಣcತ್ತಾರು, ಬೊಬ್ಬೆಕೇರಿ, ಕಲ್ಪಡ, ಕೊಡಿಯಾಲ, ಅಬೀರ, ಕಾನಾವು, ಬೆಳಂದೂರು, ಕಾಯ್ಮಣ, ಬೈತಡ್ಕ, ಅಗಳಿ ಹೀಗೆ ಹಲವು ಊರುಗಳಿಗೆ ಸಂಪರ್ಕ ಕಲ್ಪಿಸಿ ಕೇಂದ್ರಸ್ಥಾನವಾಗಿರುವ ಕಾಣಿಯೂರಿಗೆ ಸಿಸಿ ಕೆಮರಾದ ಆವಶ್ಯಕತೆ ಹೆಚ್ಚಾಗಿ ಕಾಡುತ್ತಿತ್ತು. ಅದೂ ಅಲ್ಲದೆ ಕಾಣಿಯೂರುನಲ್ಲಿ ರೈಲು ನಿಲುಗಡೆಯಾಗುತ್ತದೆ. ರೈಲಿನಲ್ಲಿ ವಿವಿಧೆಡೆಯಿಂದ ಹಲವು ಮಂದಿ ಬರುತ್ತಾರೆ. ಯಾರು ಯಾವ ರೀತಿಯ ವ್ಯಕ್ತಿಗಳು ಎಂಬುದನ್ನು ಇಂದು ಕಂಡು ಹಿಡಿಯುವುದು ಕಷ್ಟಕರ. ಕಾನೂನು ಬಾಹಿರ ಚಟುವಟಿಕೆ ನಡೆಯುವುದನ್ನು ತಡೆಗಟ್ಟಲು ಸಿಸಿ ಕೆಮರಾ ಅಳವಡಿಕೆ ಬಹುದೊಡ್ಡ ಕೊಡುಗೆಯಾಗಿದೆ.

ಸಿಸಿ ಕೆಮರಾ ಅಳವಡಿಕೆ
ಕಾಣಿಯೂರು ಪೇಟೆಗೆ ಸಿಸಿ ಕೆಮರಾ ಅಳವಡಿಸುವ ಆವಶ್ಯಕತೆಯನ್ನು ಮನಗಂಡು ಪೊಲೀಸ್‌ ಇಲಾಖೆಯ ಮನವಿ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಇಲ್ಲಿನ ವರ್ತಕರು, ಉದ್ಯಮಿಗಳು, ವ್ಯಾಪಾರಸ್ಥರು, ದಾನಿಗಳ ನೆರವಿನೊಂದಿಗೆ ಕಾಣಿಯೂರು ಗ್ರಾಮ ಪಂಚಾಯತ್‌ ಸಹಯೋಗದೊಂದಿಗೆ ಪೇಟೆಯ ಆಯ್ದ ಆಯಕಟ್ಟಿನ ಸ್ಥಳಗಳಲ್ಲಿ ಸುಮಾರು 1.5 ಲಕ್ಷ ರೂ. ವೆಚ್ಚದ  4 ಅತ್ಯಾಧುನಿಕ ಗುಣಮಟ್ಟದ ಸಿಸಿ ಕೆಮರಾವನ್ನು ಅಳವಡಿಸಿದ್ದಾರೆ. ಸಿಸಿ ಕೆಮರಾ ಅಳವಡಿಕೆಗೆ ವರ್ತಕರು, ಸಾರ್ವಜನಿಕರು ದೊಡ್ಡಮೊತ್ತದ ಸಹಕಾರ ನೀಡಿದ್ದಾರೆ. ಈ ಮೂಲಕ ಊರಿನ ಹಿತದೃಷ್ಟಿಯಿಂದ ದಾನಿಗಳ ನೆರವು ಮಹತ್ವದ ಸ್ಥಾನ ಪಡೆದಿದೆ. ಅಲ್ಲದೆ ಬರೆಪ್ಪಾಡಿ ಮೂಲಕ ಶಾಂತಿಮೊಗರು ಮೂಲಕ ದೂರದ ಧರ್ಮಸ್ಥಳ, ಸೌತಡ್ಕ ಮೊದಲಾದ ಕಡೆಗಳಿಗೆ ನಿಂತಿಕಲ್ಲು ಭಾಗದ ಜನರು ಇದೇ ಪೇಟೆಯನ್ನು ಹಾದುಹೋಗಬೇಕಿದೆ.

ಈ ಕುರಿತು ಬೆಳ್ಳಾರೆ ಠಾಣೆಯ ಠಾಣಾ ಧಿಕಾರಿ ಎಂ.ವಿ. ಚೆಲುವಯ್ಯ ಅವರು ಕಾಣಿಯೂರು ಪೇಟೆಗೆ ಸಿಸಿ ಕೆಮರಾ ಅಳವಡಿಸುವ ಅಗತ್ಯವನ್ನು ಇಲ್ಲಿನ ವ್ಯಾಪಾರಸ್ಥರ, ಉದ್ಯಮಿಗಳು, ಸಂಘಸಂಸ್ಥೆಗಳ ಮುಖ್ಯಸ್ಥರು, ಗ್ರಾಮ ಪಂಚಾಯತ್‌ ಅಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯ ಸಭೆಗಳಲ್ಲಿ ಪ್ರಸ್ತಾಪಿಸಿ ಮನದಟ್ಟು ಮಾಡಿದ್ದರು.

ಪತ್ತೆಹಚ್ಚಲು ಸಹಕಾರಿ 
ಕಾಣಿಯೂರು ಪೇಟೆಯ ಸಹೃದಯಿ ವ್ಯಾಪಾರಸ್ಥರು, ದಾನಿಗಳ ನೆರವಿನಿಂದ, ಬೆಳ್ಳಾರೆ ಪೋಲಿಸ್‌ ಠಾಣಾಧಿಕಾರಿಗಳ ಸಲಹೆಯೊಂದಿಗೆ ಸಿಸಿ ಕೆಮರಾ ಅಳವಡಿಸಲಾಗಿದೆ. ಅಹಿತಕರ ಘಟನೆಗಳು, ಅಪಘಾತ, ಕಳ್ಳತನ ಸಂದರ್ಭ ತಪ್ಪಿತಸ್ಥರನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ.
– ಸೀತಮ್ಮ ಖಂಡಿಗ, ಅಧ್ಯಕ್ಷರು, ಗ್ರಾ.ಪಂ. ಕಾಣಿಯೂರು

Advertisement

– ಪ್ರವೀಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next