ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಮುಂದುವರಿದಿದೆ. ನಿತ್ಯವೂ ನಾಲ್ಕೈದು ಜನರು ಸೋಂಕಿನಿಂದ ಬಳಲಿ ಮೃತಪಡುತ್ತಿದ್ದಾರೆ. ಇದು ಜನಾಕ್ರೋಶಕ್ಕೂ ಕಾರಣವಾಗಿದ್ದು, ಜಿಲ್ಲಾಡಳಿತ ಈಗಷ್ಟೇ ಜಾಗೃತರಾಗಿ ಕೋವಿಡ್ ಆಸ್ಪತ್ರೆಯೊಳಗೆ ಸಿಸಿ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಿದೆ. ವೈದ್ಯರು ರೋಗಿಯನ್ನು ಏಷ್ಟು ಬಾರಿ ಭೇಟಿ ಮಾಡಿ ಚಿಕಿತ್ಸೆ ನೀಡಿದ್ದಾರೆನ್ನುವುದನ್ನು ತಿಳಿಯಲು ಈ ಕೆಲಸಕ್ಕೆ ಮುಂದಾಗಿದೆ.
ಹೌದು. ಜಿಲ್ಲೆಯಲ್ಲಿ ಕೋವಿಡ್ ಆವರಿಸಿ ಬರೊಬ್ಬರಿ ಮೂರು ತಿಂಗಳು ಗತಿಸಿವೆ. ಆರಂಭಿಕ ದಿನದಲ್ಲಿ ಕೋವಿಡ್ ನ ಉಲ್ಬಣ ಕಡಿಮೆಯಿದ್ದರೂ ಈಗ ಕೈಮೀರುತ್ತಿದೆಯೇನೋ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಜಿಲ್ಲಾಡಳಿತ ಮಾತ್ರ ಕೋವಿಡ್-19 ನಿಯಂತ್ರಣಕ್ಕಾಗಿ ನಿರಂತರ ಪ್ರಯತ್ನ ನಡೆದಿದೆ ಎನ್ನುವ ಮಾತನ್ನಾಡುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿತ್ಯವೂ 150-170ರ ಸಂಖ್ಯೆಗೆ ಏರಿಕೆಯಾಗುತ್ತಿದೆ. ಇನ್ನೂ ಸೋಂಕಿನಿಂದ ಬಳಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಒಂದೆರಡು ದಿನದಲ್ಲಿ ಮೃತಪಡುತ್ತಿದ್ದಾರೆ. ಅದರಲ್ಲೂ ವೃದ್ಧರೇ ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದಲ್ಲದೇ ಆಸ್ಪತ್ರೆಯಲ್ಲಿ ಡಿ ದರ್ಜೆ ಹಾಗೂ ನರ್ಸ್‌ಗಳ ಮೂಲಕವೇ ವೈದ್ಯರು ರೋಗಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎನ್ನುವ ಆಪಾದನೆ ತುಂಬಾನೇ ಇದೆ. ವೈದ್ಯರು ಸ್ಥಳಕ್ಕೆ ತೆರಳಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ, ನೋಡುವುದಿಲ್ಲ. ಇದರಿಂದಲೇ ರೋಗಿಗಳ ಸಾವು ಹೆಚ್ಚಾಗುತ್ತಿದೆ ಎಂದು ಆಪಾದನೆಯೂ ಕೇಳಿ ಬಂದಿವೆ.
ವಿಶೇಷವೆಂದರೆ ಕೋವಿಡ್ ಆಸ್ಪತ್ರೆಯೊಳಗೆ ವೈದ್ಯರನ್ನು ಹೊರತುಪಡಿಸಿ ಮತ್ತ್ಯಾರೂ ಒಳಗೆ ಹೋಗಲ್ಲ. ಇದರಿಂದ ಒಳಗೆ ಏನು ನಡೆಯುತ್ತಿದೆ. ಹೇಗೆಲ್ಲಾ ವ್ಯವಸ್ಥೆಯಿದೆ ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಇದರಿಂದ ಜಿಲ್ಲಾಡಳಿತಕ್ಕೂ ತಲೆಬಿಸಿಯಾಗಿದೆ. ಇದೆಲ್ಲವನ್ನು ನಿವಾರಣೆ ಮಾಡಲು, ಕೋವಿಡ್-19 ಆಸ್ಪತ್ರೆಯೊಳಗೆ ಏನೆಲ್ಲಾ ಸಮಸ್ಯೆಯಿದೆ? ವೈದ್ಯರು ಹೇಗೆ ಕೆಲಸ ಮಾಡುತ್ತಿದ್ದಾರೆ? ಸೋಂಕಿತ ವ್ಯಕ್ತಿಯನ್ನು ಪ್ರತಿ ನಿತ್ಯ ಎಷ್ಟು ಬಾರಿ ಭೇಟಿಯಾಗುತ್ತಾರೆ? ಅವರಿಗೆ ಚಿಕಿತ್ಸಾ ವಿಧಾನ ಹೇಗಿದೆ ? ಎಂಬ ಮಾಹಿತಿ ತಿಳಿಯುವ ಉದ್ದೇಶದಿಂದಲೇ ಕೋವಿಡ್ ಆಸ್ಪತ್ರೆಯೊಳಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಇನ್ಮುಂದೆ ನರ್ಸ್‌ಗಳು, ವೈದ್ಯರ ಕಾರ್ಯ ನಿರ್ವಹಣೆಯ ಪಾರದರ್ಶಕತೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಇದರಿಂದ ಜನರಿಗೂ ಉತ್ತರ ನೀಡಲು ಸಾಧ್ಯವಾಗಲಿದೆ.
ಕೋವಿಡ್ ಆಸ್ಪತ್ರೆಯೊಳಗೆ ಏನು ನಡೆಯುತ್ತದೆ ಎಂಬುದೇ ನಮಗೆ ಗೊತ್ತಾಗಲ್ಲ. ಹಾಗಾಗಿ ಅಲ್ಲಿನ ಚಿಕಿತ್ಸಾ ವ್ಯವಸ್ಥೆ, ರೋಗಿಗಳ ಆರೈಕೆ ಹಾಗೂ ವೈದ್ಯರ ಭೇಟಿಯ ಕುರಿತು ನಿಗಾ ಇರಿಸಲು ಆಸ್ಪತ್ರೆ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ನಿರ್ಧರಿಸಿದ್ದೇವೆ. ಇದರಿಂದ ದಿನಕ್ಕೆ ಏಷ್ಟು ಬಾರಿ ವೈದ್ಯರು ರೋಗಿ ಭೇಟಿ ಮಾಡಿ ಬಂದಿದ್ದಾರೆ ಎಂಬ ಮಾಹಿತಿ ತಿಳಿಯಲಿದೆ.
-ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ
-ದತ್ತು ಕಮ್ಮಾರ