ಬೆಂಗಳೂರು: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ ಇ)ಯ 10ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟಿಸಿದೆ. ಪರೀಕ್ಷೆಯಲ್ಲಿ ತುಮಕೂರಿನ ವಿದ್ಯಾ ವಾರಿದಿ ಅಂತಾರಾಷ್ಟ್ರೀಯ ಶಾಲೆಯ ಯಶಸ್ ಡಿ ಟಾಪರ್ ಆಗಿದ್ದಾಳೆ. ಸಿಬಿಎಸ್ ಇ 10ನೇ ತರಗತಿ ಫಲಿತಾಂಶದಲ್ಲಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ.
ಸಿಬಿಎಸ್ ಇ 10ನೇ ತರಗತಿಯ ಪರೀಕ್ಷೆಯಲ್ಲಿ ಯಶಸ್ 500 ಅಂಕಗಳಲ್ಲಿ 498 ಅಂಕ ಪಡೆದು ರಾಜ್ಯಕ್ಕೆ ಮಾತ್ರವಲ್ಲ, ಚೆನ್ನೈ ವಲಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದಾಳೆ. ಅಲ್ಲದೇ ಧಾರವಾಡದ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನ ಗಿರಿಜಾ ಎಂ ಹೆಗಡೆ 500 ಅಂಕಕ್ಕೆ 497 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾಳೆ.
ಬೆಂಗಳೂರಿನ ಐಶ್ವರ್ಯ ಹರಿಹರನ್ ಅಯ್ಯರ್ ಹಾಗೂ ನಾಲಾದಾಳಾ ದಿಶಾ ಚೌದರಿ 497 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಟಾಪರ್ಸ್ ಆಗಿದ್ದಾರೆ. ಸಿಬಿಎಸ್ ಇ ಮೂಲಗಳ ಪ್ರಕಾರ, 2018ರ ಫಲಿತಾಂಶಕ್ಕಿಂತ ಈ ಬಾರಿ ಶೇ.4.40ರಷ್ಟು ಏರಿಕೆ ಕಂಡಿದೆ.
2018ರಲ್ಲಿ ಶೇ.86.70ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. 2019ರಲ್ಲಿ ಶೇ.91.10ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫೆಬ್ರುವರಿ 15ರಿಂದ ಏಪ್ರಿಲ್ 4ರವರೆಗೆ ದೇಶಾದ್ಯಂತ ನಡೆದ ಸಿಬಿಎಸ್ ಇ ಪರೀಕ್ಷೆಯಲ್ಲಿ ಬರೋಬ್ಬರಿ 17.74 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. 17.61 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.