ಸಿಬಿಎಸ್‌ಇ ಪರೀಕ್ಷಾ ವ್ಯವಸ್ಥೆ ಇದ್ದುದರಲ್ಲೇ ಕಟ್ಟುನಿಟ್ಟು ಎಂಬ ನಂಬಿಕೆಯಿತ್ತು. ಈ ನಂಬಿಕೆಯೂ ಹುಸಿ ಯಾಗಿದೆ. ರಾಷ್ಟ್ರವ್ಯಾಪಿ ಪರೀಕ್ಷೆ ನಡೆಸುವುದರಿಂದ ದೇಶವಿಡೀ ಸೋರಿಕೆಯ ಪರಿಣಾಮವಾಗಿದೆ.
ಅತಿ ಸುರಕ್ಷಿತ ಎಂದು ಭಾವಿಸಿದ್ದ ಸಿಬಿಎಸ್‌ಇಯ ಪರೀಕ್ಷಾ ವ್ಯವಸ್ಥೆಯ ಬಂಡವಾಳವೆಲ್ಲ ಈಗ ಬಯಲಾಗಿದೆ. 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವುದ ರೊಂದಿಗೆ ಸಿಬಿಎಸ್‌ಇ ಪರೀಕ್ಷಾ ಮಂಡಳಿ ಅಂತೆಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ವಿಶ್ವಾಸಾರ್ಹತೆಗೆ ಇನ್ನಿಲ್ಲದ ಹಾನಿಯುಂಟಾ ಗಿದೆ. ಈ ಪರೀಕ್ಷೆಗಳನ್ನು ಬರೆದಿರುವ ಸುಮಾರು 30 ಲಕ್ಷ ವಿದ್ಯಾರ್ಥಿಗಳಿಗೆ ಮರಳಿ ಪರೀಕ್ಷೆಗೆ ತಯಾರಾಗಬೇಕಾದ ಸಂಕಟ. ಅದರಲ್ಲೂ ವಾರ್ಷಿಕ ಪರೀಕ್ಷೆ ಮುಗಿದ ಕೂಡಲೇ ವಿವಿಧ ಕೋರ್ಸ್‌ಗಳಿಗೆ ಸೇರುವ ಅರ್ಹತೆ ಗಳಿಸಲು ಇರುವ ನೀಟ್ ಪರೀಕ್ಷೆಯೂ ಇರುವುದರಿಂದ 12ನೇ ತರಗತಿ ವಿದ್ಯಾರ್ಥಿಗಳ ಮೇಲಿನ ಒತ್ತಡ ದುಪ್ಪಟ್ಟಾಗಿದೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದ ಅನಿವಾರ್ಯತೆ ಈ ಲಕ್ಷಗಟ್ಟಲೆ ವಿದ್ಯಾರ್ಥಿಗಳದ್ದು.
ಪ್ರತಿ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಸಮಸ್ಯೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ರಾಜ್ಯ ಪರೀಕ್ಷಾ ಮಂಡಳಿಗಳು ನಡೆಸುವ ಪ್ರಶ್ನೆಪತ್ರಿಕೆಗಳು ಹೆಚ್ಚಾಗಿ ಸೋರಿಕೆಯಾಗುತ್ತಿದ್ದವು. 2016ರಲ್ಲಿ ಕರ್ನಾಟಕದಲ್ಲಿ ಒಂದೇ ಪಠ್ಯದ ಪ್ರಶ್ನೆ ಪತ್ರಿಕೆ ಎರಡೆರಡು ಸಲ ಸೋರಿಕೆಯಾಗಿರುವ ನೆನಪು ಇನ್ನೂ ಹಸಿರಾಗಿದೆ. ಸಿಬಿಎಸ್‌ಇ ಪರೀಕ್ಷಾ ವ್ಯವಸ್ಥೆ ಇದ್ದುದರಲ್ಲೇ ಕಟ್ಟುನಿಟ್ಟು ಎಂಬ ನಂಬಿಕೆಯಿತ್ತು. ಆದರೆ ಈಗ ಈ ನಂಬಿಕೆಯೂ ಹುಸಿಯಾಗಿದೆ. ರಾಜ್ಯ ಪರೀಕ್ಷಾ ಮಂಡಳಿಯಲ್ಲಾದರೆ ಆಯಾಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಮಾತ್ರ ಕಷ್ಟ. ಆದರೆ ಸಿಬಿಎಸ್‌ಇ ರಾಷ್ಟ್ರವ್ಯಾಪಿಯಾಗಿ ಪರೀಕ್ಷೆ ನಡೆಸುವುದರಿಂದ ಇಡೀ ದೇಶದಲ್ಲಿ ಸೋರಿಕೆಯ ಪರಿಣಾಮವಾಗಿದೆ. ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದಾರೆ. ಏನೇ ಮಾಡಿದರೂ ಮರು ಪರೀಕ್ಷೆ ಬರೆಯುವ ಅವರ ಕಷ್ಟ ತಪ್ಪಿದ್ದಲ್ಲ.ಹಿಂದೆ ಸಿಬಿಎಸ್‌ಇ ವಲಯವಾರು ಪ್ರಶ್ನೆಪತ್ರಿಕೆ ರಚಿಸುತ್ತಿತ್ತು ಹಾಗೂ ವಿದೇಶಗಳಿಗೆ ಬೇರೆಯೇ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಗುತ್ತಿತ್ತು. ಆದರೆ ಈಗ ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದೇ ಪ್ರಶ್ನೆ ಪತ್ರಿಕೆ ರಚಿಸುತ್ತಿರುವುದರಿಂದ ಇಡೀ ದೇಶದಲ್ಲಿ ಮರು ಪರೀಕ್ಷೆ ನಡೆಸುವ ಅಗತ್ಯವಿದೆ.
ಮೂರು ವರ್ಷದ ಹಿಂದೆ ಇದೇ ರೀತಿ ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಆಗ ಎಚ್‌ಆರ್‌ಡಿ ಸಚಿವೆಯಾಗಿದ್ದ ಸ್ಮತಿ ಇರಾನಿ ಯಾವ ಬೆಲೆ ತೆತ್ತಾದರೂ ಪರೀಕ್ಷೆಯ ಪಾವಿತ್ರ್ಯ ಕಾಪಾಡಲು ಇಲಾಖೆ ಬದ್ಧವಾಗಿದೆ ಎಂದು ಲೋಕಸಭೆ ಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಸಂಭವಿಸಿರುವ ಸೋರಿಕೆಗ ಇಲಾಖೆ ತನ್ನ ಮಾತು ಉಳಿಸಿ ಕೊಳ್ಳುವಲ್ಲಿ ವಿಫಲವಾಗಿದೆ ಎನ್ನುವು ದನ್ನು ಸೂಚಿಸುತ್ತದೆ. ಸೋರಿಕೆಗೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್ ಮಾಲಕರು ಹಾಗೂ ಕೆಲವು ವಿದ್ಯಾರ್ಥಿಗಳ ಬಂಧನವಾಗಿದೆ ನಿಜ. ಇವೆಲ್ಲ ಚಿಕ್ಕಪುಟ್ಟ ಮೀನುಗಳು ಮಾತ್ರ. ತಿಮಿಂಗಿಲಗಳು ಬೇರೆಯೇ ಇವೆ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಈ ತಿಮಿಂಗಿಲಗಳು ಜಾಲ ಹರಡಿಕೊಂಡಿದೆ. ಅವುಗಳನ್ನು ಹಿಡಿಯದೆ ಚಿಕ್ಕ ಮೀನುಗಳನ್ನು ಮಾತ್ರ ಹಿಡಿದರೆ ಸಮಸ್ಯೆ ಬಗೆಹರಿಯದು. ಇಂತಹ ತಿಮಿಂಗಿಲಗಳು ಶಿಕ್ಷಣ ಇಲಾಖೆಯ ಒಳಗೂ ಇವೆ.
ಪ್ರಸ್ತುತ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಎಸ್‌ಇಯ ಯಾವ ಅಧಿಕಾರಿಯನ್ನೂ ಉತ್ತರದಾಯಿಯಾಗಿ ಮಾಡಲಾಗಿಲ್ಲ ಎನ್ನುವುದು ಗಮನಾರ್ಹ ಅಂಶ. ಇಷ್ಟು ದೊಡ್ಡ ಅಪರಾಧ ಘಟಿಸಿದ್ದರೂ ಅಧಿಕಾರಿಗಳು ಪಾರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾ ವ್ಯವಸ್ಥಿತವಾಗಿ ಕಾರ್ಯಾ ಚರಿಸುತ್ತಿರುವ ಅನುಮಾನ ಹಿಂದಿನಿಂದಲೂ ಇದೆ. ಕೆಲವು ಅಧಿಕಾರಿಗಳೇ ಈ ಮಾಫಿಯಾಕ್ಕೆ ಬೆಂಗವಲಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಪ್ರತಿ ಸಲ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಯಾವುದಾದರೊಂದು ಕೋಚಿಂಗ್ ಸೆಂಟರ್ ಜತೆಗೆ ಈ ಕೃತ್ಯ ಸಂಬಂಧ ಹೊಂದಿರುತ್ತದೆ. ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಕೋಚಿಂಗ್ ಸೆಂಟರ್‌ಗಳಿಗೆ ತಮ್ಮ ವಿದ್ಯಾರ್ಥಿಗಳನ್ನು ಹೇಗಾದರೂ ಮಾಡಿ ತೇರ್ಗಡೆಗೊಳಿಸುವ ಅನಿವಾರ್ಯತೆ ಇರುತ್ತದೆ. ಇಂತಹ ಕೆಲ ಕೋಚಿಂಗ್ ಸೆಂಟರ್‌ಗಳೇ ಈ ಮಾದರಿಯ ಕೃತ್ಯ ಎಸಗುತ್ತಿವೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಕೋಚಿಂಗ್ ಸೆಂಟರ್‌ಗಳಿಗೆ ಲಗಾಮು ಹಾಕುವ ಕೆಲಸ ಮೊದಲು ಆಗಬೇಕು. ಇನ್ನು ತಂತ್ರಜ್ಞಾನ ಇಷ್ಟು ಮುಂದುವರಿದಿರುವ ಕಾಲದಲ್ಲಿ ಇನ್ನೂ ಹಳೇ ಕಾಲದ ಪರೀಕ್ಷಾ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸರಿಯಲ್ಲ. ಸೋರಸಿಕೆಯಾದ ಪ್ರಶ್ನೆಪತ್ರಿಕೆ ಯನ್ನು ಕ್ಷಣಾರ್ಧದಲ್ಲಿ ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ತಲುಪಿಸುವ ಚಾಣಾಕ್ಷತೆಯನ್ನು ಆರೋಪಿಗಳು ಹೊಂದಿದ್ದಾರೆ. ಪರೀಕ್ಷಾ ಮಂಡಳಿ ಕೂಡಾ ಪ್ರಶ್ನೆಪತ್ರಿಕೆಗಳ ಸುರಕ್ಷೆಗೆ ಇದೇ ಮಾದರಿಯನ್ನು ಚಾಣಾಕ್ಷ ಕ್ರಮಗಳನ್ನು ಕೈಗೊಳ್ಳಬೇಕು.