ಹೊಸದಿಲ್ಲಿ : ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವು ಇದೀಗ ವಿರೋಧ ಪಕ್ಷಗಳಿಗೆ, ವಿಶೇಷವಾಗಿ ಕಾಂಗ್ರೆಸ್‌ಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸುವುದಕ್ಕೆ ಹೊಸ ಅಸ್ತ್ರವೊಂದನ್ನು ನೀಡಿದೆ.
ಪ್ರಶ್ನೆ ಪತ್ರಿಕೆ ಸೋರಿ ಹೋಗಿರವುದಕ್ಕೆ “ಚೌಕೀದಾರ್ ದುರ್ಬಲ”ನಾಗಿರುವುದೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ಟಿàಟ್ ಮಾಡಿ ಟೀಕಿಸಿದ್ದಾರೆ.
ವ್ಯಂಗ್ಯ ಧಾಟಿಯ ಟೀಕೆಯಲ್ಲಿ ರಾಹುಲ್ ಇತ್ತೀಚೆಗಿನ ಇತರ ಲೀಕ್‌ಗಳನ್ನು ಉಲ್ಲೇಖೀಸಿ “ಡಾಟಾ ಲೀಕ್, ಆಧಾರ್ ಡಾಟಾ ಲೀಕ್, ಎಸ್‌ಎಸ್‌ಸಿ ಎಕ್ಸಾಮ್ ಪೇಪರ್ ಲೀಕ್, ಇಲೆಕ್ಷನ್ ಡೇಟ್ ಲೀಕ್ – ಹೀಗೆ ಪ್ರತಿಯೊಂದರಲ್ಲೂ ಲೀಕ್’ ಎಂದು ಹ್ಯಾಶ್ ಟ್ಯಾಗ್ ಬಸ್-ಏಕ್-ಔರ್ ಸಾಲ್ (ಇನ್ನೂ ಒಂದು ವರ್ಷ) ಎಂದು ಟ್ವೀಟ್ ಮಾಡಿರುವುದು ಗಮನಾರ್ಹವಾಗಿದೆ.
ಸಿಬಿಎಸ್‌ಇ ಪೇಪರ್‌ಲೀಕ್ ಆಗಿರುವುದನ್ನು ಖಂಡಿಸಿ ಟ್ವೀಟ್ ಮಾಡಿರುವ ಇತರ ಕಾಂಗ್ರೆಸ್ ನಾಯಕರೆಂದರೆ ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಕಪಿಲ್ ಸಿಬಲ್.
ಇದೇ ರೀತಿ ದಿಲ್ಲಿ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಆಪ್ ನಾಯಕರಾಗಿರುವ ಮನೀಶ್ ಸಿಸೋಡಿಯ ಅವರು ಕೂಡ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ ದಾಳಿ ನಡೆಸಿದ್ದಾರೆ.