ಹೊಸದಿಲ್ಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿಗಳ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟಿಸಲಾಗಿದೆ.10 ಮತ್ತು 12 ನೇ ತರಗತಿಗಳ ಪರೀಕ್ಷೆಗಳಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. 90 ಮತ್ತು 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಸ್ವಲ್ಪ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
10 ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 93.60 ರಷ್ಟಿದೆ, ಇದು ಕಳೆದ ವರ್ಷಕ್ಕಿಂತ ಶೇಕಡಾ 0.48 ಏರಿಕೆಯಾಗಿದೆ.12 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಖ್ಯೆ ಶೇಕಡಾ 0.65 ಏರಿಕೆಯಾಗಿದ್ದು ಕಳೆದ ವರ್ಷದಿಂದ 87.98 % ರಷ್ಟಾಗಿದೆ.
12 ನೇ ತರಗತಿಯಲ್ಲಿ ಒಟ್ಟು 1.16 ಲಕ್ಷ ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಮತ್ತು 24,068 ಮಂದಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪೈಕಿ 262 ಮಕ್ಕಳು ವಿಶೇಷ ಅಗತ್ಯವುಳ್ಳ ಮಕ್ಕಳ (CSWN) ವರ್ಗಕ್ಕೆ ಸೇರಿದವರಾಗಿದ್ದಾರೆ. CSWN ವಿಭಾಗದ ನಲವತ್ಮೂರು ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ 1.12 ಲಕ್ಷ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಮತ್ತು 22,622 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರು.
10 ನೇ ತರಗತಿಯಲ್ಲಿ 47,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಮತ್ತು 2.12 ಲಕ್ಷಕ್ಕೂ ಹೆಚ್ಚು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ 1.95 ಲಕ್ಷ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಮತ್ತು 44,297 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದರು.
ಆರೋಗ್ಯಕರ ಸ್ಪರ್ಧೆ
ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸುವ ಸಲುವಾಗಿ ಯಾವುದೇ ಮೆರಿಟ್ ಪಟ್ಟಿ ಇರುವುದಿಲ್ಲ ಎಂದು CBSE ಘೋಷಿಸಿದೆ. ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಭಾಗಗಳನ್ನು ನೀಡುವುದನ್ನು ರದ್ದುಗೊಳಿಸಲು ಮಂಡಳಿಯು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.