Advertisement

ರೆಡ್ಡಿ ಪತ್ನಿ ವಿರುದ್ಧ ಸಿಬಿಐ ತನಿಖೆಗೆ ಮನವಿ: ಹಿರೇಮಠ

03:45 AM Jan 02, 2017 | Team Udayavani |

ಹುಬ್ಬಳ್ಳಿ:  ಗಾಲಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ವಿರುದ್ಧ 40ಸಾವಿರ ಕೋಟಿ ರೂ. ಅಕ್ರಮ ಸಂಪಾದನೆ ಆರೋಪ ಕೇಳಿ ಬಂದಿದ್ದು, ಈ ಕುರಿತು ತನಿಖೆಗೆ ಬೆಂಗಳೂರಿನ ಸಿಬಿಐ ಶಾಖೆಗೆ ಮನವಿ ಸಲ್ಲಿಸಿದ್ದೇನೆ ಎಂದು ಸಮಾಜ ಪರಿವರ್ತನೆ ಸಮುದಾಯ ಸಂಸ್ಥೆಯ ಎಸ್‌.ಆರ್‌.ಹಿರೇಮಠ ಹೇಳಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಅಕ್ರಮ ಗಣಿ ಹಾಗೂ ಅಕ್ರಮ ಸಂಪತ್ತು, ಕಪ್ಪು ಹಣ ಬದಲಾವಣೆ ಇತ್ಯಾದಿ ಆರೋಪಗಳಿಗೆ ಗುರಿಯಾಗಿದ್ದಾರೆ. ಜನಾರ್ದನರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಅಕ್ರಮ ಗಳಿಕೆ ವಿಚಾರಣೆ ನಡೆಸುವಂತೆ ಡಿ.29ರಂದು ಸಿಬಿಐಗೆ ಮನವಿ ಸಲ್ಲಿಸಲಾಗಿದ್ದು, ತನಿಖೆಯಾದರೆ ಮಾತ್ರ ಪ್ರಧಾನಿ  ಮೋದಿ ಅವರ ಸ್ವತ್ಛ ಭಾರತ ಅಭಿಯಾನಕ್ಕೂ ಅರ್ಥ ಬರುತ್ತದೆ ಎಂದರು.

ಪ್ರಧಾನಿ ಕ್ರಮವಹಿಸಲಿ:
ಕಪ್ಪು ಹಣ, ಭ್ರಷ್ಟಾಚಾರ ವಿರುದ್ಧ ಸಮರವೆಂದು ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲು ತಮ್ಮ ಪಕ್ಷದಲ್ಲಿನ ಭ್ರಷ್ಟಾಚಾರಿಗಳನ್ನು ಸ್ವತ್ಛ ಮಾಡುವ ಕಾರ್ಯಕ್ಕೆ ಮುಂದಾಗಲಿ. ಭ್ರಷ್ಟಾಚಾರದ ಹಲವು ಆರೋಪಗಳನ್ನು ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ, ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದ್ದಾರೆ. ಇನ್ನೊಂದು ಕಡೆ ಪ್ರಧಾನಿ ಭ್ರಷ್ಟಾಚಾರ ವಿರುದ್ಧ ನಮ್ಮ ಸಮರ ಎಂದು ಘೋಷಿಸಿದರೆ ಜನ ನಂಬುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಹಿರಿಯ ಅಧಿಕಾರಿ ಸುಬೋಧ ಯಾದವ್‌ ಅವರ ಪದೇ ಪದೇ ವರ್ಗಾವಣೆ, ಮೈಸೂರು ಮಿನರಲ್ಸ್‌ ಹಗರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ ಹಾಗೂ ಪ್ರಮುಖ ಆರು ಹಿರಿಯ ಅಧಿಕಾರಿಗಳ ಸಂರಕ್ಷಣೆ ನಿರ್ಣಯ ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರಕ್ಕೆ ಕುಮಕ್ಕು ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ. ಭ್ರಷ್ಟ ಅಧಿಕಾರಿ ಶ್ಯಾಂ ಭಟ್‌ ವಿರುದ್ಧ ವಿಚಾರಣೆಗೆ ಇದುವರೆಗೂ ಅನುಮತಿ ನೀಡಿಲ್ಲ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಕುಟುಂಬ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರ ವಿರುದ್ಧದ ಅಕ್ರಮ ಸಂಪಾದನೆ, ಆಸ್ತಿ ಕುರಿತಾದ ಪ್ರಕರಣಗಳ ಕುರಿತು ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ನೀಡಿದ ತೀರ್ಪಿನ ಕುರಿತು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಹದ್ದಿನ ಕಣ್ಣು ಇರಿಸಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಎಸ್‌.ಆರ್‌.ಹಿರೇಮಠ ತಿಳಿಸಿದರು.

Advertisement

ಕಪ್ಪತಗುಡ್ಡ ಹೋರಾಟಕ್ಕೆ ಬೆಂಬಲ:
ಕಪ್ಪತಗುಡ್ಡ ಸಂರಕ್ಷಣೆ ನಿಟ್ಟಿನಲ್ಲಿ ಗದಗ ತೋಂಟದಾರ್ಯ ಮಠದ ಡಾ| ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಯ ಬೆಂಬಲವಿದೆ ಎಂದು ಎಸ್‌.ಆರ್‌.ಹಿರೇಮಠ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next