ಪಾಟ್ನಾ: ಯುಪಿಎ-1 ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳದ ಇಬ್ಬರು ಹಿರಿಯ ಮುಖಂಡರ ಮನೆ ಮೇಲೆ ಸಿಬಿಐ ಬುಧವಾರ (ಆಗಸ್ಟ್ 24) ದಾಳಿ ನಡೆಸಿದೆ.
ಇದನ್ನೂ ಓದಿ:ಕಟೀಲು ಮೇಳಗಳಿಂದಲೂ ಇನ್ನು ಕಾಲಮಿತಿ ಯಕ್ಷಗಾನ : ಆಡಳಿತ ಮಂಡಳಿ ನಿರ್ಣಯ
ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ವೇಳೆ ರಾಷ್ಟ್ರೀಯ ಜನತಾ ದಳ ಬೆಂಬಲ ನೀಡಿದ ಮರುದಿನವೇ ಸಿಬಿಐ ಈ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ. ಎರಡು ವಾರಗಳ ಹಿಂದೆ ನಿತೀಶ್ ಕುಮಾರ್ ಬಿಜೆಪಿ ಮೈತ್ರಿಯನ್ನು ಕೈಬಿಟ್ಟು, ಆರ್ ಜೆಡಿ ಜೊತೆ ಕೈಜೋಡಿಸಿತ್ತು.
ಆರ್ ಜೆಡಿ ರಾಜ್ಯಸಭಾ ಸದಸ್ಯ ಅಹ್ಮದ್ ಅಶ್ಫಾಕ್ ಕರೀಂ ಮತ್ತು ಎಂಎಲ್ ಸಿ ಸುನೀಲ್ ಸಿಂಗ್ ನಿವಾಸದ ಮೇಲೆ ಸಿಬಿಐ ಇಂದು ಬೆಳಗ್ಗೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
“ಇದೊಂದು ಉದ್ದೇಶಪೂರ್ವಕ ದಾಳಿಯಾಗಿದೆ. ಸಿಬಿಐ ದಾಳಿಯ ಹೆದರಿಕೆಯಿಂದ ಆರ್ ಜೆಡಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಶ್ವಾಸದಿಂದ ಈ ರೀತಿ ನಡೆದುಕೊಳ್ಳುತ್ತಿರುವುದಾಗಿ ಸುನೀಲ್ ಸಿಂಗ್” ಸುದ್ದಿಗಾರರ ಜತೆ ಮಾತನಾಡುತ್ತ ಆರೋಪಿಸಿದ್ದಾರೆ.
“ಬಿಹಾರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ಸಿಟ್ಟಿನ ಪರಿಣಾಮ ಸಿಬಿಐ ಮತ್ತು ಇತರ ಏಜೆನ್ಸಿಗಳು ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ” ಎಂದು ಮಂಗಳವಾರ ರಾತ್ರಿ ಆರ್ ಜೆಡಿ ವಕ್ತಾರ ಟ್ವೀಟ್ ಮಾಡಿ ಆರೋಪಿಸಿದ್ದರು.