ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮನೆ, ಕಚೇರಿ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಖಂಡಿಸಿ ಸೋಮವಾರ ನಗರದಲ್ಲಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ಧರಣಿ ನಡೆಸಿದರು.
ಮೊದಲಿಗೆ ಬೆಳಗ್ಗೆ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿದ ಕಾರ್ಯಕರ್ತರು ಮಿಥುನ್ ರೈ ನೇತೃತ್ವದಲ್ಲಿ ಧರಣಿ ನಡೆಸಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಡಿಕೆಶಿ ಅವರ ಮನೆ ಮೇಲಿನ ಸಿಬಿಐ ದಾಳಿಯನ್ನು ಖಂಡಿಸಿ ರಸ್ತೆ ಮಧ್ಯೆ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮಿಥುನ್ ರೈ ಅವರು ಮಾತನಾಡಿ, ರಾಜ್ಯ ಸರಕಾರವು ದ್ವೇಷದ ರಾಜಕಾರಣ ಮಾಡುತ್ತಿದ್ದು, ವಿಪಕ್ಷದ ಮೇಲೆ ಐಟಿ, ಸಿಬಿಐ ದಾಳಿಯ ಮೂಲಕ ಭಯ ಹುಟ್ಟಿಸುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹೆದರುವುದಿಲ್ಲ. ಜನತೆಗೆ ಇದರ ಹಿಂದಿನ ಮರ್ಮ ಗೊತ್ತಿದೆ. ಬಿಜೆಪಿ ಸರಕಾರಕ್ಕೆ ರಾಜ್ಯದ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಕೋವಿಡ್-19 ನಿಯಮಾವಳಿ ಉಲ್ಲಂಘಿಸಿ ಧರಣಿ ನಡೆಸಿದ ಆರೋಪದ ಮೇಲೆ ಧರಣಿ ನಿರತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಕಾರ್ಪೊರೇಟರ್ ಎ.ಸಿ. ವಿನಯ ರಾಜ್, ಪ್ರಮುಖರಾದ ಸವದ್ ಸುಳ್ಯ, ಅನಿಲ್ ಕುಮಾರ್, ಸಂಶುದ್ದೀನ್ ಕುದ್ರೋಳಿ, ಪ್ರವೀಣ್ ಆಳ್ವ, ರಮಾನಂದ ಪೂಜಾರಿ, ಅನ್ಸಾರ್ ಶಾಲಿಮಾರ್ ಮೊದಲಾದವರು ನೇತೃತ್ವ ವಹಿಸಿದ್ದರು.