ನವದೆಹಲಿ: ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ-ಉತ್ತರಪ್ರದೇಶ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಕೇಂದ್ರ ಸರ್ಕಾರ ಶುಕ್ರವಾರ(ಜ.29, 2021) ಪಂಜಾಬ್ ನ 40 ಉಗ್ರಾಣ(ದಾಸ್ತಾನು ಕೊಠಡಿ)ಗಳ ಮೇಲೆ ದಾಳಿ ನಡೆಸಿ ಅಕ್ಕಿ ಮತ್ತು ಗೋಧಿಯನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರೈತ ಹೋರಾಟ ಬೆಂಬಲಿಸಿ ಜಂಟಿ ಅಧಿವೇಶನದ ರಾಷ್ಟ್ರಪತಿ ಭಾಷಣಕ್ಕೆ ಬಹಿಷ್ಕಾರ: ಎಚ್ ಡಿ ದೇವೇಗೌಡ
ಕಳೆದ ರಾತ್ರಿಯಿಂದಲೇ ಸಿಬಿಐ ಅರೆಸೇನಾಪಡೆ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ದಾಸ್ತಾನಿರಿಸಿದ ಅಕ್ಕಿ ಮತ್ತು ಗೋಧಿಯನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.
ಸಿಬಿಐ ಪಂಜಾಬ್ ಧಾನ್ಯಗಳ ಖರೀದಿ ನಿಗಮ (PUNGRAIN),ಪಂಜಾಬ್ ಉಗ್ರಾಣ ಮತ್ತು ಕೆಲವು ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ(ಎಫ್ ಸಿಐ)ದ ಉಗ್ರಾಣಗಳ ಮೇಲೆ ದಾಳಿ ನಡೆಸಿದೆ. ಆದರೆ ಸಿಬಿಐ ದಾಳಿ ನಡೆಸಿದ ಪ್ರದೇಶಗಳ ನಿಖರ ಮಾಹಿತಿ ಇನ್ನಷ್ಟೇ ಖಚಿತವಾಗಬೇಕಾಗಿದೆ. ಮೂಲಗಳ ಪ್ರಕಾರ, 2019-20 ಹಾಗೂ 2020-21ನೇ ಸಾಲಿನಲ್ಲಿ ಸಂಗ್ರಹಿಸಿದ ಗೋಧಿ ಮತ್ತು ಅಕ್ಕಿಯ ಸ್ಯಾಂಪಲ್ಸ್ ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಗಣರಾಜ್ಯೋತ್ಸವದಂದು ಹಿಂಸಾಚಾರ ನಡೆದ ನಂತರ ಪಂಜಾಬ್, ಹರ್ಯಾಣ ಮತ್ತು ಉತ್ತರಪ್ರದೇಶ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ತೀವ್ರ ಜಟಾಪಟಿ ಏರ್ಪಟ್ಟ ಬಳಿಕ ಈ ದಾಳಿ ನಡೆದಿರುವುದಾಗಿ ವರದಿ ತಿಳಿಸಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸತ್ ನಲ್ಲಿ ಮೂರು ನೂತನ ಕಾಯ್ದೆಗಳು ಅಂಗೀಕಾರಗೊಂಡ ನಂತರ ಸಾವಿರಾರು ರೈತರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.