Advertisement
ವಿಶೇಷವೆಂದರೆ ನಾಯ್ಡು ಅವರ ಈ ನಿರ್ಧಾರಕ್ಕೆ ಬೆಂಬಲ ನೀಡಿರುವ ಪ. ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದಾಳಿ ನಡೆಸುವ ಮತ್ತು ತನಿಖೆ ನಡೆಸುವ ಸಾಮಾನ್ಯ ಅನುಮತಿಯನ್ನು ವಾಪಸ್ ಪಡೆದಿದ್ದಾರೆ. ಈ ಹಿಂದೆ ಸಿಬಿಐ ಬಳಸಿ ಆಂಧ್ರದಲ್ಲಿ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ನಾಯ್ಡು ಆರೋಪಿಸಿದ್ದರು. ವಿಪಕ್ಷ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಜತೆ ಸೇರಿಕೊಂಡು ಬಿಜೆಪಿ ಟಿಡಿಪಿ ವಿರುದ್ಧ ಕುಕೃತ್ಯಗಳನ್ನು ನಡೆಸುತ್ತಿದೆ. ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಆಂಧ್ರ ಸರಕಾರದ ಈ ಕ್ರಮವನ್ನು ವಿರೋಧಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಬಿಜೆಪಿ ಕೂಡ ನಾಯ್ಡು ಅವರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.
ದಿಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್‌ಮೆಂಟ್ ಕಾಯ್ದೆ 1946 ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ರಾಜ್ಯಗಳಿಗೆ ತೆರಳಿ ತನಿಖೆ ನಡೆಸಲು ಆ ರಾಜ್ಯಗಳು ಸಿಬಿಐಗೆ ಲಿಖೀತ ಅನುಮತಿ ನೀಡಬೇಕು. ಕಳೆದ ಆ.3ರಂದು ಇದೇ ರೀತಿ ಆಂಧ್ರದ ಸರಕಾರವು ಈ ಅನುಮತಿಯನ್ನು ನವೀಕರಿಸಿತ್ತು. ಆದರೆ ಈಗ ಈ ಅನುಮತಿಯನ್ನು ಆಂಧ್ರ ಸರಕಾರ ಹಿಂಪಡೆದಿದೆ. ಇದರಿಂದಾಗಿ ಪ್ರತಿ ಬಾರಿ ಸಿಬಿಐ ಅಧಿಕಾರಿ ಆಂಧ್ರಕ್ಕೆ ತನಿಖೆಗಾಗಿ ತೆರಳುವಾಗ ಆಂಧ್ರ ಸರಕಾರದ ಅನುಮತಿ ಕೋರಬೇಕಾಗುತ್ತದೆ. ಈ ಹಿಂದೆ ಒಟ್ಟಾರೆ ಅನುಮತಿ ನೀಡಿದ್ದರಿಂದ, ಪ್ರತಿ ಬಾರಿ ಸಿಬಿಐ ಅಧಿಕಾರಿ ಆಂಧ್ರಕ್ಕೆ ಕಾಲಿಡುವ ಮುನ್ನ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿರುತ್ತಿರಲಿಲ್ಲ. ಅಷ್ಟೇ ಅಲ್ಲ, ದಿಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್‌ಮೆಂಟ್ ಕಾಯ್ದೆ 1946ರ ಪರಿಚ್ಛೇದ 6ರಲ್ಲೂ ರಾಜ್ಯಗಳ ಅನುಮತಿ ಇಲ್ಲದೇ ಕೇಂದ್ರೀಯ ತನಿಖಾ ಸಂಸ್ಥೆ ರಾಜ್ಯವನ್ನು ಪ್ರವೇಶಿಸುವಂತಿಲ್ಲ ಎಂದು ಉಲ್ಲೇಖೀಸಲಾಗಿದೆ.