Advertisement

ಐಟಿ ಅಧಿಕಾರಿಗಳೇ ಸಿಬಿಐ ಬಲೆಗೆ

12:37 AM Apr 04, 2019 | Lakshmi GovindaRaju |

ಬೆಂಗಳೂರು: ರಿಯಲ್‌ ಎಸ್ಟೇಟ್‌ ಕಂಪನಿ ಮಾಲೀಕರಿಂದ 14 ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬುಧವಾರ ರಾತ್ರಿ ಬಂಧಿಸಿದೆ.

Advertisement

ಆದಾಯ ತೆರಿಗೆ ಇಲಾಖೆಯ ಎಚ್‌.ಆರ್‌ ನಾಗೇಶ್‌ ಹಾಗೂ ನರೇಂದರ್‌ ಸಿಂಗ್‌ ಬಂಧಿತರು. ಜಯನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ದೂರುದಾರ ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ವೇಳೆಯೇ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಮೊದಲಿಗೆ ಎಚ್‌.ಆರ್‌ ನಾಗೇಶ್‌ನನ್ನು ಬಂಧಿಸಿದ್ದು, ಇವರ ಮಾಹಿತಿ ಮೇರೆಗೆ ಮತ್ತೂಬ್ಬ ಅಧಿಕಾರಿ ನರೇಂದರ್‌ ಸಿಂಗ್‌ರನ್ನು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದರು.

ಈ ಅಧಿಕಾರಿಗಳನ್ನು ತೀವ್ರ ವಿಚಾರಣೆಗೊಳಪಡಿಸಿರುವ ಸಿಬಿಐ ಅಧಿಕಾರಿಗಳು, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ದೂರುದಾರ ರಿಯಲ್‌ ಎಸ್ಟೇಟ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ರಾವ್‌ ನೀಡಿದ್ದ ದೂರಿನ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Advertisement

15 ಲಕ್ಷಕ್ಕೆ ಬೇಡಿಕೆ; 14ಕ್ಕೆ ಡೀಲ್‌!: ಮಾರ್ಚ್‌ 6ಂದು ಬಸವನಗುಡಿಯ ರಿಯಲ್‌ ಎಸ್ಟೇಟ್‌ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್‌ ರಾವ್‌ ಅವರ ಕಚೇರಿ ಮೇಲೆ ಆರೋಪಿಗಳಾಗಿರುವ ಐಟಿ ಅಧಿಕಾರಿಗಳನ್ನೊಳಗೊಂಡ ತಂಡ ಶೋಧ ಕಾರ್ಯಾಚರಣೆ ನಡೆಸಿ 25 ಲಕ್ಷ ಹಾಗೂ 15 ಲಕ್ಷ ರೂ. ಹಣಕಾಸು ವಹಿವಾಟಿನ ಎರಡು ರಸೀದಿ,

ಬಸವನಗುಡಿಯ ಸರ್ವೋತ್ತಮ ರಾಜು ಎಂಬುವವರು ನೀಡಿದ್ದ 10 ಚೆಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದರು. ಈ ಕುರಿತು ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣ ಕಟ್ಟಡದಲ್ಲಿರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೊಟ್ಟು ಹೋಗಿದ್ದರು.

ಬಳಿಕ ವಿಚಾರಣೆ ವೇಳೆ ಕಂಪನಿ ನಡೆಸಿದ್ದ 1.51 ಕೋಟಿ ರೂ ಹಾಗೂ 1. 57 ಕೋಟಿ ರೂ. ವಹಿವಾಟಿಗೆ ಸಂಬಂಧಿಸಿದ ಮುಂಗಡ ತೆರಿಗೆ 10 ರಿಂದ 15 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದರು. ಇದಾದ ಬಳಿಕ ಶ್ರೀನಿವಾಸರಾವ್‌ 10 ಲಕ್ಷ ರೂ. ಮುಂಗಡ ತೆರಿಗೆ ಪಾವತಿ ಬಗ್ಗೆ ಕಚೇರಿಗೆ ತೆರಳಿ ರಸೀದಿ ಸಲ್ಲಿಸಿದ್ದರು.

ಈ ಬೆಳವಣಿಗೆಗಳ ಮಧ್ಯೆಯೇ ದೂರುದಾರ ಶ್ರೀನಿವಾಸ್‌ ರಾವ್‌, ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಪಡಿಸಲು 7.5 ಲಕ್ಷ ರೂ. ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಆದರೆ, ಇದನ್ನು ನಿರಾಕರಿಸಿದ್ದ ಈ ಇಬ್ಬರು ಅಧಿಕಾರಿಗಳು ನೀವು ಹಣ ಕೊಡಿ, ಸರ್ವೋತ್ತಮ ರಾಜು ಅವರ ಬಳಿಯಿಂದ ಹಣ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

ಇದಾದ ಬಳಿಕ ಎರಡು ಕೇಸ್‌ ಇತ್ಯರ್ಥಪಡಿಸಲು 15 ಲಕ್ಷ ರೂ. ಬೇಡಿಕೆ ಮಾಡಿದ್ದು, ಕೊನೆಗೆ 14 ಲಕ್ಷ ರೂ. ಪಡೆಯಲು ಒಪ್ಪಿದ್ದರು ಎಂದು ಶ್ರೀನಿವಾಸ್‌ ರಾವ್‌ ನೀಡಿರುವ ದೂರಿನಲ್ಲಿ ಉಲ್ಲೇಖೀಸಲಾಗಿದೆ.

ಈ ಕುರಿತು ಶ್ರೀನಿವಾಸ್‌ ರಾಜು ಏ.3ರಂದೇ ಸಿಬಿಐ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಯನಗರ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ಹಣ ಪಡೆಯಲು ಐಟಿ ಅಧಿಕಾರಿ ನಾಗೇಶ್‌ ಆಗಮಿಸಿದಾಗ ಹಣದ ಸಮೇತ ಬಂಧಿಸಲಾಯಿತು ಎಂದು ಸಿಬಿಐನ ಉನ್ನತ ಅಧಿಕಾರಿಯೊಬ್ಬರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next