Advertisement

ಸಿಬಿಐ ಅಧಿಕಾರಿಗಳ ಕಚ್ಚಾಟ ವಿಶ್ವಾಸಾರ್ಹತೆಗೆ ಧಕ್ಕೆ  

06:00 AM Oct 23, 2018 | Team Udayavani |

ಐದು ವರ್ಷಗಳ ಹಿಂದೆ ಸುಪ್ರಿಂ ಕೋರ್ಟ್‌ ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದಂತೆ ಲೋಪಗಳನ್ನು ಎಸಗಿದ್ದ ಸಿಬಿಐಯನ್ನು ಪಂಜರದ ಗಿಣಿ, ಸರ್ಕಾರದ ಕೈಗೊಂಬೆ ಎಂದಿತ್ತು.

Advertisement

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿರುವ ಸಿಬಿಐಯಲ್ಲಿ ಕೆಲ ಸಮಯದಿಂದೀಚೆಗೆ ನಡೆಯುತ್ತಿರುವ ಆಂತರಿಕ ಕಚ್ಚಾಟ ಅದರ ವಿಶ್ವಾ ಸಾರ್ಹತೆಗೆ ಇನ್ನಿಲ್ಲದ  ಹಾನಿಯುಂಟು ಮಾಡುತ್ತಿದೆ. ದುರದೃಷ್ಟವೆಂದರೆ, ಸಿಬಿಐ ಉನ್ನತ ಸ್ತರದ ಅಧಿಕಾರಿಗಳೇ ಕಚ್ಚಾಟದಲ್ಲಿ ತೊಡಗಿಕೊಂಡಿ ರುವುದು. ಪ್ರಸ್ತುತ ಸಿಬಿಐ ಮುಖ್ಯಸ್ಥರಾಗಿರುವುದು ಅಲೋಕ್‌ ವರ್ಮ. ಅವರ ನಂತರದ ಸ್ಥಾನದಲ್ಲಿರುವವರು ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನ. ಇವರಿಬ್ಬರ ನಡುವೆಯೇ ಕಿತ್ತಾಟ ನಡೆಯುತ್ತಿದೆ. ಇದರ ಪರಿಣಾಮವಾಗಿ ಅಸ್ಥಾನ ವಿರುದ್ಧ ಹೈದರಾಬಾದಿನ ಮಾಂಸ ರಫ್ತು ವ್ಯಾಪಾರಿ ಮೊಯಿನ್‌ ಖುರೇಶಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಸತೀಶ್‌ ಸನಾ ಎಂಬಾತನಿಗೆ ಕ್ಲೀನ್‌ಚಿಟ್‌ ನೀಡಲು 2 ಕೋಟಿ ರೂ. ಲಂಚ ಸ್ವೀಕರಿಸಿದ ಕೇಸ್‌ ದಾಖಲಿಸಲಾಗಿದೆ. ಈ ಕೇಸಿಗೆ ಸಂಬಂಧಿಸಿದಂತೆ ಸಿಬಿಐ ಡಿಎಸ್‌ಪಿ ದೇವೆಂದರ್‌ ಕುಮಾರ್‌ ಎಂಬವರ ಬಂಧನವೂ ಆಗಿದೆ. ಅಸ್ಥಾನ ವಿರುದ್ಧ ವರ್ಮ ಒಟ್ಟು ಆರು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಮನೆಯ ಮೇಲೆ ದಾಳಿ ಮಾಡುವುದನ್ನು ಅಲೋಕ್‌ ವರ್ಮ ಉದ್ದೇಶಪೂರ್ವಕವಾಗಿ ವಿಳಂಬಿಸಿದ್ದಾರೆ ಎಂದು ಅಸ್ಥಾನ ಕೆಲ ತಿಂಗಳ ಹಿಂದೆ ಆರೋಪಿಸು ವುದರೊಂದಿಗೆ ಇವರಿಬ್ಬರ ನಡುವಿನ ವೈಮನಸ್ಸು ತೀವ್ರವಾಗಿತ್ತು. ಇದೀಗ ಎಫ್ಐಆರ್‌ ದಾಖಲಾಗಿ ಓರ್ವ ಅಧಿಕಾರಿಯ ಬಂಧನವೂ ಆಗುವುದರೊಂದಿಗೆ, ಒಳಜಗಳ ಬೀದಿಗೆ ಬಂದಂತಾಗಿದೆ. 

ಐದು ವರ್ಷಗಳ ಹಿಂದೆ ಸುಪ್ರಿಂ ಕೋರ್ಟ್‌ ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದಂತೆ ಲೋಪಗಳನ್ನು ಎಸಗಿದ್ದ ಸಿಬಿಐಯನ್ನು ಪಂಜರದ ಗಿಣಿ ಎಂದು ಕರೆದಿತ್ತು. ಪರಮೋಚ್ಚ ತನಿಖಾ ಸಂಸ್ಥೆಯಾಗಿದ್ದರೂ ಸಿಬಿಐ ಸ್ವತಂತ್ರವಾಗಿರದೆ, ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವುದೇ ಸುಪ್ರೀಂ ಕೋರ್ಟಿನ ಆಕ್ರೋಶಕ್ಕೆ ಕಾರಣವಾಗಿತ್ತು. ಸುಪ್ರೀಂ ಕೋರ್ಟಿನ ಈ ತೀಕ್ಷ್ಣ ಚಾಟಿಯೇಟು ಆ ದಿನಗಳಲ್ಲಿ ಬಹಳ ಚರ್ಚೆಗೂ ಗುರಿಯಾಗಿತ್ತು. ಸಿಬಿಐಯನ್ನು ಸರಕಾರಿ ಹಿಡಿತದಿಂದ ಸ್ವತಂತ್ರಗೊಳಿಸುವ ಕುರಿತು ಚಿಂತನ ಮಂಥನಗಳು ನಡೆದಿದ್ದವು, ಸಾಕಷ್ಟು ಸಲಹೆ ಸೂಚನೆಗಳನ್ನೂ ನೀಡಲಾ ಗಿತ್ತು. ಆದರೆ ಇಷ್ಟೆಲ್ಲ ಆದ ಬಳಿಕವೂ ಸಿಬಿಐಯಲ್ಲಿ ಯಾವುದೇ ಸುಧಾರಣೆ ಯಾಗಿಲ್ಲ. ಈಗಲೂ ಅದು ಆಡಳಿತ ಸೂತ್ರ ಹಿಡಿದಿರುವವರ ಕೈಗೊಂಬೆ ಯಾಗಿಯೇ ಉಳಿದಿದೆ ಮತ್ತು ಕೆಲವೊಮ್ಮೆ ಸರಕಾರದ ಮುಖವಾಣಿ ಯಾ ಗಿಯೂ ಬದಲಾಗುತ್ತದೆ ಎನ್ನುವುದು ದುರದೃಷ್ಟಕರ ವಿಷಯ. 

ಯಾವುದಾದರೂ ದೊಡ್ಡ ಅಪರಾಧ ಅಥವಾ ಹಗರಣ ನಡೆದರೆ ಸಿಬಿಐ ತನಿಖೆಯಾಗಬೇಕೆಂದು ಒತ್ತಾಯಿಸುವುದು ಮಾಮೂಲು. ಸಿಬಿಐ ತನಿಖೆಯಿಂದ ನ್ಯಾಯ ಸಿಗಬಹುದು ಎಂಬ ವಿಶ್ವಾಸ ಇಂದಿಗೂ ಜನರಲ್ಲಿ ಇದೆ. ಆದರೆ ಜನರ ಈ ನಿರೀಕ್ಷೆಯನ್ನು ಈಡೇರಿಸುವಲ್ಲಿ ಸಿಬಿಐ ಸಫ‌ಲವಾಗಿದೆಯೇ ಎಂದು ಕೇಳಿದಾಗ ನಿರಾಶಾದಾಯಕ ಉತ್ತರ ಸಿಗುತ್ತದೆ. ಸಿಬಿಐ ತನಿಖೆ ನಡೆಸಿದ ಎಷ್ಟೋ ಹೈಪ್ರೊಫೈಲ್‌ ಕೇಸುಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತಿರುವುದು ಈಗ ಸಾಮಾನ್ಯವಾಗಿದೆ. ಇದು ಒಟ್ಟಾರೆಯಾಗಿ ಸಿಬಿಐಯ ದಕ್ಷತೆಯ ಮುಂದೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಇಡುತ್ತದೆ. 

ಸಿಬಿಐ ನೇಮಕಾತಿ ರಾಜಕೀಯದಿಂದ ಮುಕ್ತವಾಗಿರಬೇಕೆಂಬ ಕೂಗು ಹಿಂದಿನಿಂದಲೂ ಇದೆ. ಆದರೆ ಅಧಿಕಾರಕ್ಕೆ ಬರುವ ಪ್ರತಿ ಸರಕಾರವೂ ತನಗನುಕೂಲವಾದ ಅಧಿಕಾರಿಯನ್ನೇ ತನಿಖಾ ಸಂಸ್ಥೆಯ ಆಯಕಟ್ಟಿನ ಜಾಗಕ್ಕೆ ತರುತ್ತದೆ. ಪ್ರಸ್ತುತ ಲಂಚದ ಆರೋಪಕ್ಕೊಳಗಾಗಿರುವ ಅಸ್ಥಾನ ಕೂಡಾ ಒಂದು ಕಾಲದಲ್ಲಿ ನರೇಂದ್ರ ಮೋದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅಧಿಕಾರಿ. ಅವರನ್ನು ಸಿಬಿಐಗೆ ಕರೆತಂದಿರುವುದೇ ಮೋದಿ ಸರಕಾರ. ಹೀಗಾಗಿ, ಇಡೀ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಲು ಹೆಚ್ಚು ಸಮಯವೇನೂ ತಗುಲಲಿಕ್ಕಿಲ್ಲ. 

Advertisement

ಸಿಬಿಐಗೆ ಅಧಿಕಾರಿಗಳನ್ನು ನೇಮಿಸುವುದು ಪೊಲೀಸ್‌ ಪಡೆಯಿಂದ. ಇಲ್ಲಿರುವ ಆದಷ್ಟು ದಕ್ಷ ಮತ್ತು ಸಮರ್ಥ ಅಧಿಕಾರಿಗಳನ್ನು ಆರಿಸಿ ಸಿಬಿಐಗೆ ನೇಮಿಸಿಕೊಳ್ಳಲಾಗುತ್ತದೆ. ಹೀಗಾಗಿ, ಪೊಲೀಸ್‌ ಪಡೆಯಲ್ಲಿ ಸುಧಾರಣೆಯಾಗದೆ ಸಿಬಿಐಯಲ್ಲಿ ಸುಧಾರಣೆಯನ್ನು ನಿರೀಕ್ಷಿಸುವಂತಿಲ್ಲ. ಸಿಬಿಐಗಾಗಿಯೇ ಪ್ರತ್ಯೇಕ ಪಡೆಯನ್ನು ಸಜ್ಜುಗೊಳಿಸುವುದು, ತರಬೇತಿ ನೀಡುವುದೆಲ್ಲ ತುರ್ತಾಗಿ ಆಗುವ ಕೆಲಸಗಳಲ್ಲ. ಆದ್ದರಿಂದ ಸದ್ಯಕ್ಕೆ ಪೊಲೀಸ್‌ ಪಡೆಯ ಸುಧಾರಣೆಯನ್ನು ಆದ್ಯತೆಯಾಗಿ ಪರಿಗಣಿಸಿದರೆ ಸಿಬಿಐಯಲ್ಲೂ ತುಸು ಸುಧಾರಣೆಯಾಗುವ ಸಾಧ್ಯತೆಯಿದೆ. 

ಇದೇ ವೇಳೆ, ಮೇಲಿನಿಂದಲೇ ಸಿಬಿಐಯನ್ನು ಸ್ವತ್ಛಗೊಳಿಸುವ ಕೆಲಸವೂ ಆಗಬೇಕು ಎನ್ನುವುದು ನಿಜ. ಇದು ಸಾಧ್ಯವಾಗಬೇಕಾದರೆ ಸಿಬಿಐಯಲ್ಲಿ ರಾಜಕೀಯದ ಹಸ್ತಕ್ಷೇಪ ನಿಲ್ಲಬೇಕು. ಸಿಬಿಐ ವಿಶ್ವಾಸಾರ್ಹತೆ ಉಳಿಯಬೇಕಾ ದರೆ ತಕ್ಷಣವೇ ಸರಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next