Advertisement

ಸಿಬಿಐಗೇ ‘ದೀದಿ’ಶಾಕ್‌ : CBI ಅಧಿಕಾರಿಗಳನ್ನೇ ಬಂಧಿಸಿದ ಮಮತಾ

12:30 AM Feb 04, 2019 | |

ಕೋಲ್ಕತಾ/ಹೊಸದಿಲ್ಲಿ: ಬಹುಕೋಟಿ ರೋಸ್‌ ವ್ಯಾಲಿ ಮತ್ತು ಶಾರದಾ ಚಿಟ್‌ ಫ‌ಂಡ್‌ ಹಗರಣದ ತನಿಖೆ ನಡೆಸಿದ್ದ ವಿಶೇಷ ತಂಡದ ನೇತೃತ್ವ ವಹಿಸಿದ್ದ ಹಾಲಿ ಕೋಲ್ಕತಾ ಪೊಲೀಸ್‌ ಆಯುಕ್ತ, ಐಪಿಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ರನ್ನು ವಿಚಾರಣೆ ನಡೆಸಲು ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಕೋಲ್ಕತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ರವಿವಾರ ನಡೆದ ಈ ಬೆಳವಣಿಗೆ ರಾಜಕೀಯ ತಿರುವು ಪಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ವಿಪಕ್ಷಗಳು ತಿರುಗಿಬಿದ್ದಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡ ಸಹಿತ ಪ್ರಮುಖರು ಮಮತಾಗೆ ಬೆಂಬಲ ಸೂಚಿಸಿದ್ದಾರೆ. ಜತೆಗೆ ಸಂಸತ್‌ನಲ್ಲಿ ಸೋಮವಾರ ವಿಚಾರ ಪ್ರಸ್ತಾವಿಸಲು ತೀರ್ಮಾನಿಸಿವೆ. 

ಟಿಎಂಸಿ ವರಿಷ್ಠೆ ಕೋಲ್ಕತಾದ ಮೆಟ್ರೋ ಸಿನೆಮಾ ಬಳಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪಶ್ಚಿಮ ಬಂಗಾಲ ಸರಕಾರದ ಅಧಿಕಾರಿಗಳು ಬಹುಕೋಟಿ ಹಗರಣದ ವಿರುದ್ಧ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿರುವ ಸಿಬಿಐಯ ಹಂಗಾಮಿ ನಿರ್ದೇಶಕ ನಾಗೇಶ್ವರ ರಾವ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿ ಸಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಭಾರೀ ಮಹತ್ವದ್ದಾಗಿದೆ. 

ಹೈಡ್ರಾಮಾ
ಪಶ್ಚಿಮ ಬಂಗಾಲ ರಾಜಧಾನಿ ಕೋಲ್ಕತಾದ ಲುಡಾನ್‌ ರಸ್ತೆಯಲ್ಲಿರುವ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ನಿವಾಸಕ್ಕೆ 40ಕ್ಕೂ ಹೆಚ್ಚು ಮಂದಿ ಸಿಬಿಐ ಅಧಿಕಾರಿಗಳು ರವಿವಾರ ಸಂಜೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಭದ್ರತಾ ಸಿಬಂದಿ ಕೇಂದ್ರ ತಂಡಕ್ಕೆ ಒಳಗೆ ಪ್ರವೇಶಿಸುವುದಕ್ಕೆ ಅವಕಾಶ ಕೊಡಲಿಲ್ಲ. ಸುದ್ದಿ ತಿಳಿಯುತ್ತಲೇ ಪಶ್ಚಿಮ ಬಂಗಾಲ ಪೊಲೀಸ್‌ ಮಹಾನಿರ್ದೇಶಕ ಸಹಿತ ಹಿರಿಯ ಅಧಿಕಾರಿಗಳು ಪೊಲೀಸ್‌ ಆಯುಕ್ತರ ನಿವಾಸಕ್ಕೆ ಧಾವಿಸಿದರು. ಒಂದು ಹಂತದಲ್ಲಿ ಸಿಬಿಐ ಅಧಿಕಾರಿಗಳು ಮತ್ತು ಕೋಲ್ಕತಾ ಪೊಲೀಸರ ನಡುವೆ ಬಿರುಸಿನ ಮಾತಿನ ಚಕಮಕಿ ಮತ್ತು ತಳ್ಳಾಟವೂ ನಡೆಯಿತು. ಅಂತಿಮವಾಗಿ 40 ಮಂದಿ ಸಿಬಿಐ ಅಧಿಕಾರಿಗಳ ಪೈಕಿ 15 ಮಂದಿಯನ್ನು ಬಲವಂತವಾಗಿ ಜೀಪ್‌ನಲ್ಲಿ ಕುಳ್ಳಿರಿಸಿಕೊಂಡು ಪೊಲೀಸರು ಠಾಣೆಗೆ ಕರೆದೊಯ್ದರು.

ಸುದ್ದಿ ತಿಳಿದು ರೋಷಗೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀವ್‌ ಕುಮಾರ್‌ ನಿವಾಸಕ್ಕೆ ಧಾವಿಸಿದರು. ಅಲ್ಲಿ ಸುದ್ದಿಗೋಷ್ಠಿ ನಡೆಸಿ, ಪ್ರಧಾನಿ ಮೋದಿ ಮತ್ತು ಶಾ ಪಶ್ಚಿಮ ಬಂಗಾಲದಲ್ಲಿ ದಂಗೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಟೀಕಿಸಿದರು. ಜತೆಗೆ ಪ್ರಜಾಪ್ರಭುತ್ವದ ಉಳಿವಿಗಾಗಿ ಧರಣಿ ನಡೆಸುವುದಾಗಿ ಘೋಷಿಸಿದರು. ಬಳಿಕ ಐತಿಹಾಸಿಕ ಮೆಟ್ರೋ ಸಿನೆಮಾ ಬಳಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೋಮವಾರ ಪಶ್ಚಿಮ ಬಂಗಾಲದ ಅಲ್ಲಲ್ಲಿ ರಸ್ತೆ, ರೈಲು ತಡೆ ನಡೆಸಬೇಕು ಎಂದು ಕರೆ ನೀಡಿದ್ದಾರೆ. ಬಿಜೆಪಿಯವರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ನಡೆಸಲು ಮುಂದಾದರೆ ಅದನ್ನು ಎದುರಿಸಲು ಸಿದ್ಧ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್‌ ಅವರು ಟಿಎಂಸಿ ನಾಯಕರು ಮತ್ತು ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರಧಾನಿಗೆ ಸೂಚನೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ “ಏನಾದರೂ ಮಾಡಿ’ ಎಂದು ಆದೇಶ ನೀಡಿದ್ದರು ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ರವಿವಾರ ರಾತ್ರಿಯೇ ಅಲ್ಲಲ್ಲಿ ಟಿಎಂಸಿ ನಾಯಕರು, ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಕುತೂಹಲಕಾರಿ ವಿಚಾರವೆಂದರೆ ಸಿಬಿಐ ಸಮನ್ಸ್‌ಗೆ ಸೊಪ್ಪು ಹಾಕದ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರು ದೀದಿ ಧರಣಿ ಸ್ಥಳದಲ್ಲಿಯೇ ಇದ್ದರು.

Advertisement

ಆಯೋಗಕ್ಕೆ ಪತ್ರ
ಈ ಎಲ್ಲ ಗಲಾಟೆ ನಡುವೆ ಪಶ್ಚಿಮ ಬಂಗಾಲ ಗೃಹ ಕಾರ್ಯದರ್ಶಿ ಅತ್ರಿ ಭಟ್ಟಾಚಾರ್ಯ ಪೊಲೀಸ್‌ ಆಯುಕ್ತರು ಕರ್ತವ್ಯದಿಂದ ಗೈರು ಹಾಜರಾಗಿರುವ ಬಗ್ಗೆ ಕೇಂದ್ರ ಚುನಾವಣ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಸಂಸತ್‌ನಲ್ಲಿ ಪ್ರಸ್ತಾವ
ದೇಶದ ಉಳಿವಿಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತೊಲಗಬೇಕು. ಸಿಬಿಐ ಕ್ರಮವನ್ನು ಸಂಸತ್‌ನಲ್ಲಿ ಪ್ರಸ್ತಾವಿಸುವುದಾಗಿ ಟಿಎಂಸಿ ನಾಯಕ ಡೆರಿಕ್‌ ಒ ಬ್ರಿಯಾನ್‌ ಹೇಳಿದ್ದಾರೆ. 

ಸುಪ್ರೀಂಗೆ ಮನವಿ: ಯಾವ ಕಾರಣಕ್ಕಾಗಿ ತನಿಖಾ ಸಂಸ್ಥೆಯ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಪಶ್ಚಿಮ ಬಂಗಾಲ ಸರಕಾರದ ಅಸಹಕಾರದ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿ ದಿಲ್ಲಿಯಲ್ಲಿ ಸಿಬಿಐನ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್‌ ತಿಳಿಸಿದ್ದಾರೆ. ಐಪಿಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿವೆ. ಇದರ ಜತೆಗೆ ಪಶ್ಚಿಮ ಬಂಗಾಲ ರಾಜ್ಯಪಾಲರ ಜತೆಗೆ ವಿಚಾರ ಚರ್ಚಿಸಲು ಸಮಯ ಕೇಳಲಾಗಿದೆ ಎಂದು ಹೇಳಿದ್ದಾರೆ. 

ರಾಜೀವ್‌ ವಿರುದ್ಧ ಏನು ಆರೋಪ?
ಸದ್ಯ ಕೋಲ್ಕತಾ ಪೊಲೀಸ್‌ ಆಯುಕ್ತರಾಗಿರುವ ರಾಜೀವ್‌ ಕುಮಾರ್‌ ರೋಸ್‌ ವ್ಯಾಲಿ ಮತ್ತು ಶಾರದಾ ಚಿಟ್‌ಫ‌ಂಡ್‌ಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿದ್ದರು. ಅವರಿಗೆ ಟಿಎಂಸಿಯ ಪ್ರಭಾವಿ ನಾಯಕರ ಸಂಪರ್ಕವಿದೆ ಎಂದು ಹೇಳಲಾಗಿದೆ. ಇದರ ಜತೆಗೆ ತನಿಖೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ದಾಖಲೆಗಳು ನಾಪತ್ತೆಯಾಗಿವೆ. ಅದರ ಬಗ್ಗೆ ಅವರನ್ನು ವಿಚಾರಣೆ ನಡೆಸಲು ಸಿಬಿಐ ನಿರ್ಧರಿಸಿದೆ. ಈ ಬಗ್ಗೆ ಅವರಿಗೆ ಮಾಹಿತಿ ನೀಡಿದರೂ ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ. ಅವರ ವಿಚಾರಣೆಗೆ ತೆರಳಿದಾಗ ಈ ರಾದ್ಧಾಂತ ಉಂಟಾಗಿದೆ.

ಯೋಗಿ ಕಾಪ್ಟರ್‌ ಇಳಿಯಲು ಸಿಗದ ಅನುಮತಿ
ಪಶ್ಚಿಮ ಬಂಗಾಲದಲ್ಲಿ ರವಿವಾರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು 2 ರ್ಯಾಲಿಗಳಲ್ಲಿ ಪಾಲ್ಗೊಳ್ಳ ಬೇಕಿತ್ತು. ಆದರೆ ಅವರ ಹೆಲಿಕಾಪ್ಟರ್‌ಗೆ ಇಳಿಯಲು ಅನುಮತಿ ನಿರಾಕರಿಸುವ ಮೂಲಕ ಮಮತಾ ಬ್ಯಾನರ್ಜಿ ಸರಕಾರ ಮತ್ತೂಂದು ಸುತ್ತಿನ ಬಿಜೆಪಿ-ಟಿಎಂಸಿ ವಾಕ್ಸಮರಕ್ಕೆ ನಾಂದಿ ಹಾಡಿದರು. ದೀದಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಯೋಗಿ, “ಟಿಎಂಸಿ ಸರಕಾರವೇ ಜನ ವಿರೋಧಿ. ಮಮತಾ ಅವರ ಆಡಳಿತದ ಅಂತ್ಯಕ್ಕೆ ದಿನಗಣನೆ ಆರಂಭವಾಗಿದೆ’ ಎಂದಿದ್ದಾರೆ. ಅಲ್ಲದೆ, ಅನುಮತಿ ಸಿಗದ ಕಾರಣ ಯೋಗಿ ದೂರವಾಣಿ ಮೂಲಕ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ.

ಸಂಸತ್‌ನಲ್ಲಿ  ಪ್ರಸ್ತಾವ
ರವಿವಾರದ ಬೆಳವಣಿಗೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿರುವ ಮಮತಾ ಬ್ಯಾನರ್ಜಿ ಆಪ್ತ, ರಾಜ್ಯಸಭಾ ಸದಸ್ಯ ಡೆರಿಕ್‌ ಒ ಬ್ರಿಯಾನ್‌ “ಸೋಮವಾರ ಸಂಸತ್‌ನಲ್ಲಿ ಬಂಧನ ಪ್ರಯತ್ನ ಪ್ರಸ್ತಾವಿಸುತ್ತೇವೆ. ಪಶ್ಚಿಮ ಬಂಗಾಲದಲ್ಲಿ ದಂಗೆ ಎಬ್ಬಿಸಲು ಅಮಿತ್‌ ಶಾ- ಮೋದಿ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಗೆ ಟಿಎಂಸಿ ಬಗ್ಗೆ ಹೆದರಿಕೆ ಇರುವುದರಿಂದಲೇ ಈ ರೀತಿಯ ಬೆಳವಣಿಗೆಯಾಗಿದೆ’ ಎಂದು ಟೀಕಿಸಿದ್ದಾರೆ.

ಕೇಂದ್ರ ಪಡೆ ರವಾನೆ
ಕೋಲ್ಕತಾದಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ತುಕಡಿಗಳು ಧಾವಿಸಿ, ಗಸ್ತು ತಿರುಗಲಾರಂಭಿಸಿವೆ.

ಮಮತಾಗೆ ವಿವಿಧ ನಾಯಕರ ಬೆಂಬಲ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎಸ್‌ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ, ಶರದ್‌ ಪವಾರ್‌, ಒಮರ್‌ ಅಬ್ದುಲ್ಲಾ ಸಹಿತ ಪ್ರಮುಖರು ಮಮತಾಗೆ ಬೆಂಬಲ ಸೂಚಿಸಿದ್ದಾರೆ.

ಪಶ್ಚಿಮ ಬಂಗಾಲದಲ್ಲಿನ ಬೆಳವಣಿಗೆ ಆತಂಕಕಾರಿಯಾಗಿದೆ. ಕೋಲ್ಕತಾದಲ್ಲಿನ ಬೆಳವಣಿಗೆ ಬಗ್ಗೆ  ಮಾಹಿತಿ ಪಡೆಯುತ್ತಿದ್ದೇನೆ. ಯಾವ ಅಂಶದ ಮೇಲೆ ಸಿಬಿಐ ಅಧಿಕಾರಿಗಳನ್ನು  ವಶಕ್ಕೆ ಪಡೆಯಲಾಗಿದೆ ಎಂದು ಗೊತ್ತಾಗಿಲ್ಲ. ರಾಜೀವ್‌ ಕುಮಾರ್‌ ವಿರುದ್ಧ  ಆರೋಪಗಳಿಗೆ ಸಾಕ್ಷ್ಯಗಳಿವೆ.
– ಎಂ.ನಾಗೇಶ್ವರ ರಾವ್‌,ಸಿಬಿಐ ಹಂಗಾಮಿ ಮುಖ್ಯಸ್ಥ

ಕೋಲ್ಕತಾ ಪೊಲೀಸ್‌ ಆಯುಕ್ತರನ್ನು ಸಿಬಿಐ ಬಂಧಿಸಲು  ತೆರಳಿದ್ದು, ಶಾಕ್‌ ತಂದಿದೆ. ಪಶ್ಚಿಮ ಬಂಗಾಲದಲ್ಲಿ  ರವಿವಾರ ನಡೆದ ಘಟನೆ ತುರ್ತು ಪರಿಸ್ಥಿತಿಗೆ ಸಮಾನವಾಗಿದೆ.
– ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಮೋದಿ-ಶಾ ಪಶ್ಚಿಮ ಬಂಗಾಲದಲ್ಲಿ  ದಂಗೆಗೆ ಕುಮ್ಮಕ್ಕು  ನೀಡಲು ಪ್ರಯತ್ನ ನಡೆಸಿದ್ದಾರೆ. ರಕ್ತಸಿಕ್ತ  ಕೈಗಳಿರುವ ಪ್ರಧಾನಿ ಜತೆಗೆ ಮಾತನಾಡಲು ನಾಚಿಕೆಯಾಗುತ್ತಿದೆ. ಸಂವಿಧಾನ ರಕ್ಷಣೆಗಾಗಿ ಧರಣಿ ನಡೆಸಿದ್ದೇನೆ.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next