ವಿಜಯಪುರ: ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ವ್ಯಾಪಾರಿಯನ್ನು ಯಾಮಾರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಜರುಗಿದೆ.
ಎಪಿಎಂಸಿ ವ್ಯಾಪರಸ್ಥರೂ ಆಗಿರುವ ಅರ್ಬನ್ ಬ್ಯಾಂಕ್ ನಿರ್ದೇಶಕ ಷಣ್ಮುಖ ಸಂಗಮ ಅವರು ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಹೋಗುತ್ತಿದ್ದಾಗ ಸೈನ್ ಬೈಕ್ ಮೇಲೆ ಎದುರಿಗೆ ಬಂದ ಅನಾಮಿಕ ವ್ಯಕ್ತಿಯೊಬ್ಬ ತಾನು ಸಿಬಿಐ ಅಧಿಕಾರಿ ಎಂದು ಗುರುತಿನ ಚೀಟಿ ತೋರಿಸಿ ಪರಿಚಯಿಸಿಕೊಂಡಿದ್ದಾನೆ.
ಅಲ್ಲದೇ ನಿಮ್ಮ ಮನೆಗೆ ಸಿಬಿಐ ದಾಳಿ ನಡೆಯಲಿದೆ, ಎರಡು ದಿನ ಚಿನ್ನಾಭರಣ ಧರಿಸಬೇಡಿ ಎಂದು ಹೇಳಿದ್ದಾನೆ. ಅಲ್ಲದೇ ಷಣ್ಮುಖ ಅವರು ಧರಿಸಿದ್ದ ಸುಮಾರು 1.30 ಲಕ್ಷ ರೂಪಾಯಿ ಮೌಲ್ಯದ 30 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.
ಲಾಕೆಟ್, ಎರಡು ಉಂಗುರ ಚಿನ್ನಾಭರಣಗಳನ್ನು ಪಡೆದು, ಕರವಸ್ತ್ರದಲ್ಲಿ ಸುತ್ತಿಕೊಂಡು, ಎರಡು ದಿನ ಬಂಗಾರ ಹಾಕಿಕೊಳ್ಳಬೇಡಿ ಎಂದು ಹೇಳಿದ್ದಾನೆ. ಅಲ್ಲದೇ ಷಣ್ಮುಖ ಅವರ ಕಣ್ತಪ್ಪಿಸಿ ಚಿನ್ನಾಭರಣ ಇಲ್ಲದ ಮತ್ತೊಂದು ಕರವಸ್ತ್ರವನ್ನು ಷಣ್ಮುಖ ಅವರ ಕೈಯಲ್ಲಿ ಕೊಟ್ಟು ಪರಾರಿಯಾಗಿದ್ದಾನೆ.
ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.