ಕೋಲ್ಕತಾ: ಇತ್ತೀಚೆಗೆ ನಡೆದ ಬಿರ್ ಭೂಮ್ ಹಿಂಸಾಚಾರ ಮತ್ತು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ಎಫ್ ಐಆರ್ ನಲ್ಲಿ 21 ಮಂದಿ ಆರೋಪಿಗಳನ್ನು ಹೆಸರಿಸಿರುವುದಾಗಿ ಶನಿವಾರ (ಮಾರ್ಚ್ 26) ತಿಳಿಸಿದೆ.
ಇದನ್ನೂ ಓದಿ:SSLC ಪರೀಕ್ಷೆ: 14,022 ವಿದ್ಯಾರ್ಥಿಗಳು ಸಜ್ಜು : ಈ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ
ಬಿರ್ ಭೂಮ್ ಹತ್ಯಾಕಾಂಡ, ಹಿಂಸಾಚಾರ ಪ್ರಕರಣವನ್ನು ಕೋಲ್ಕತಾ ಹೈಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ನೀಡಿತ್ತು. 8 ಮಂದಿ ಸಜೀವ ದಹನ ಪ್ರಕರಣವು ರಾಷ್ಟ್ರವ್ಯಾಪಿ ಪರಿಣಾಮ ಬೀರಲಿದ್ದು, ಪಶ್ಚಿಮಬಂಗಾಲ ಸರಕಾರವು ಸಿಬಿಐಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೈಕೋರ್ಟ್ ಸಲಹೆ ನೀಡಿತ್ತು.
ಹಿಂಸಾಚಾರದಲ್ಲಿ ಎಂಟು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ನಡೆದ ಬಿರ್ ಭೂಮ್ ಜಿಲ್ಲೆಯ ಬೋಗ್ಟುಯಿ ಗ್ರಾಮಕ್ಕೆ ಸಿಬಿಐ ತಂಡ ಭೇಟಿ ನೀಡಿ ತನಿಖೆಯನ್ನು ಆರಂಭಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮಬಂಗಾಳ ಡಿಜಿಪಿ ಮನೋಜ್ ಮಾಲ್ವಿಯಾ ತಿಳಿಸಿದ್ದಾರೆ.
ಟಿಎಂಸಿ ಮುಖಂಡನ ಹತ್ಯೆ ನಂತರ ಮಾರ್ಚ್ 21ರಂದು ಬಿರ್ ಭೂಮ್ ನಲ್ಲಿ ಅಪರಿಚಿತ ವ್ಯಕ್ತಿಗಳು ಹತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಂಟು ಮಂದಿ ಸಜೀವವಾಗಿ ದಹನಗೊಂಡಿದ್ದರು.
ನಾವು ಈಗಾಗಲೇ ಪ್ರಕರಣದ ತನಿಖೆಯನ್ನು ಆರಂಭಿಸಿದ್ದು, ನಮಗೆ ನೀಡಿರುವ ಅಂತಿಮ ಗಡುವಿನವರೆಗೆ ಯುದ್ಧೋಪಾದಿಯಲ್ಲಿ ತನಿಖೆ ನಡೆಸಲಿದ್ದೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.