ಹೊಸದಿಲ್ಲಿ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರೈಲು ದುರಂತದ ತನಿಖೆಯನ್ನು ಮಂಗಳವಾರ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ವಹಿಸಿಕೊಂಡಿದೆ. ಮುಂಜಾನೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಸಿಬಿಐ ತಂಡ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ರೈಲ್ವೇಯ ವಿದ್ಯುನ್ಮಾನ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ತಿರುಚಲಾಗಿತ್ತೇ, ಘಟನೆಯ ಹಿಂದೆ ವಿಧ್ವಂಸಕ ಶಕ್ತಿಗಳ ಕೈವಾಡವಿತ್ತೇ ಎಂಬುದು ಸಿಬಿಐ ತನಿಖೆಯಿಂದ ಸ್ಪಷ್ಟವಾಗಲಿದೆ.
ಒಳಗಿನವರ ಕೈವಾಡ?: ಭಾರತೀಯ ರೈಲ್ವೇಯ ರಿಲೇ ರೂಂನಲ್ಲಿ ಡಬಲ್ ಲಾಕಿಂಗ್ ವ್ಯವಸ್ಥೆಯಿದೆ. ಅಂದರೆ ಈ ಕೊಠಡಿಗೆ ಎರಡು ಕೀಲಿ ಕೈಗಳಿರುತ್ತವೆ. ಒಂದು ಕೀಲಿಕೈ ನಿಲ್ದಾಣದ ಉಸ್ತುವಾರಿಯ ಬಳಿಯಿದ್ದರೆ, ಮತ್ತೂಂದು ಸಿಗ್ನಲಿಂಗ್ ಸಿಬಂದಿಯ ಕೈಯಲ್ಲಿರುತ್ತದೆ. ಹೀಗಾಗಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯ ಸಮೀಪಕ್ಕೆ ಸಾರ್ವಜನಿಕರು ಬರಲು ಸಾಧ್ಯವೇ ಇಲ್ಲ. ಹೀಗಾಗಿ ಈ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದರೂ, ಅದನ್ನು ಈ ಕೊಠಡಿಯೊಳಗೆ ಬರಲು ಸಾಧ್ಯವಾಗುವವರು ಅಂದರೆ ರೈಲ್ವೇಯ ಒಳಗಿನವರೇ ಮಾಡಿರುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಒಂದೆಡೆ ನೋವು, ಮತ್ತೂಂದೆಡೆ ಪವಾಡ!: ಬಹನಾಗದಲ್ಲಿ ರೈಲುಗಳ ಸಂಚಾರ ಪುನಾರಂಭಗೊಂಡಿದೆ. ಆದರೆ ಆಸ್ಪತ್ರೆಗಳು, ಶವಾಗಾರಗಳಲ್ಲಿನ ಆರ್ತನಾದ ಮಾತ್ರ ಇನ್ನೂ ನಿಂತಿಲ್ಲ. ಕೆಲವರಿಗೆ ತಮ್ಮವರು ಎಲ್ಲಿದ್ದಾರೆಂದೇ ಗೊತ್ತಿಲ್ಲ, ಮೃತದೇಹವೂ ಸಿಕ್ಕಿಲ್ಲ. ಅಂಥವರು ಶವಾಗಾರಕ್ಕೊಮ್ಮೆ, ಆಸ್ಪತ್ರೆಗೊಮ್ಮೆ, ಜಿಲ್ಲಾಧಿಕಾರಿಗಳ ಕಚೇರಿಗೊಮ್ಮೆ ಹತಾಶರಾಗಿ ಅಲೆದಾಡುತ್ತಿದ್ದಾರೆ. ಮೊಹಮ್ಮದ್ ಸರ್ಫರಾಜ್ ಎಂಬವರು ದುರಂತದಲ್ಲಿ ಮಡಿದ ತಮ್ಮ ಪತ್ನಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಶವಾಗಾರಕ್ಕೆ ಮತ್ತೆ ಧಾವಿಸಿದ್ದಾರೆ. 150 ಮೃತದೇಹಗಳ ಪೈಕಿ ಪತ್ನಿಯ ಮೃತದೇಹವನ್ನು ಹುಡುಕಿದ್ದ ಸರ್ಫರಾಜ್ ಗೆ ತಮ್ಮ ಪುತ್ರಿಯ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಕೆಲವು ಮೃತದೇಹಗಳನ್ನು ಬೇರೆಡೆಗೆ ಸಾಗಿಸಿರುವ ಕಾರಣ ಅಲ್ಲಾದರೂ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಸರ್ಫರಾಜ್ . ಇನ್ನು ಹೇಲಾರಾಂ ಮಲಿಕ್ ಅವರ 23 ವರ್ಷದ ಪುತ್ರ ಅಂದು ಹೇಗೋ ಬೋಗಿಯಿಂದ ಹಾರಿ ತಪ್ಪಿಸಿಕೊಂಡು ಹಳಿ ಮೇಲೆ ಬಿದ್ದಿದ್ದರು. ಅವರು ಸತ್ತಿದ್ದಾರೆಂದು ಭಾವಿಸಿ ಇತರೆ ಶವಗಳೊಂದಿಗೆ ಅವರನ್ನೂ ಟ್ರಕ್‌ಗೆ ಹಾಕಲಾಗಿತ್ತು. ಅನಂತರದಲ್ಲಿ ಅವರಿಗೆ ಪ್ರಜ್ಞೆ ಬಂದಿದ್ದು, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವಾಡವೆಂಬಂತೆ ನನ್ನ ಮಗ ಬದುಕುಳಿದ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ಹೇಲಾರಾಂ.
ಟಿಎಂಸಿ ವಿರುದ್ಧ ಆರೋಪ: ಈ ನಡುವೆ ರೈಲು ದುರಂತದ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಟಿಎಂಸಿಯವರು ಪೊಲೀಸರೊಂದಿಗೆ ಸೇರಿ ರೈಲ್ವೇ ಅಧಿಕಾರಿಗಳ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಿದೊಡನೆ ಟಿಎಂಸಿಗೆ ಭಯ ಶುರುವಾಗಿದೆ ಎಂದು ಪಶ್ಚಿಮ ಬಂಗಾಲ ವಿಪಕ್ಷಗಳ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ವಿದ್ಯುದಾಘಾತದಿಂದ 40 ಸಾವು: ಕಳೆದ ಶುಕ್ರವಾರ ನಡೆದ ರೈಲ್ವೇದುರಂತದ ವೇಳೆ ವಿದ್ಯುದಾಘಾ ತದಿಂದಲೇ 40 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಅಪಘಾತ ನಡೆದ ವೇಳೆ ಮೇಲಿನ ವಿದ್ಯುತ್ ಕೇಬಲ್‌ಗಳೂ ಕತ್ತರಿಸಿ ಕೋಚ್‌ಗಳ ಮೇಲೆ ಬಿದ್ದಿದ್ದವು. ಅವೂ ಸಾವಿಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗಿದೆ.
ಭ್ರಾಂತಿ, ಕಿರಿಕಿರಿ: ಸತತ ಮೂರು ದಿನಗಳ ಕಾಲ ಕಾರ್ಯಾಚರಣೆ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಎನ್‌ಡಿಆರ್‌ಎಫ್ ಸಿಬಂದಿ ಸ್ಥಿತಿ ವಿಚಿತ್ರವಾಗಿದೆ. ಒಬ್ಬ ಸಿಬಂದಿಗೆ ನೀರು ನೋಡಿದಾಗೆಲ್ಲ ರಕ್ತವನ್ನೇ ನೋಡಿದಂತಾಗುತ್ತಿದೆಯಂತೆ. ಇನ್ನೊಬ್ಬ ಸಿಬಂದಿಗೆ ಕಾರ್ಯಾಚರಣೆಯ ತೀವ್ರತೆಯ ಪರಿಣಾಮ ಹಸಿವಾ ಗುವುದೇ ನಿಂತುಹೋಗಿದೆಯಂತೆ… ಹೀಗೆಂದು ಎನ್‌ಡಿಆರ್‌ಎಫ್ ಅಧಿಕಾರಿಗಳೇ ತಿಳಿಸಿದ್ದಾರೆ.
100 ಮೃತದೇಹಗಳ ಗುರುತೇ ಸಿಕ್ಕಿಲ್ಲ!
ಘಟನೆ ನಡೆದು 80 ಗಂಟೆಗಳು ಕಳೆದರೂ ಇನ್ನೂ 100ರಷ್ಟು ಮೃತದೇಹಗಳ ಗುರುತು ಸಿಕ್ಕಿಲ್ಲ. ತೀವ್ರ ಗಾಯಗಳಾಗಿರುವ ಕಾರಣ ಶವಗಳು ಕೊಳೆಯಲಾರಂಭಿಸಿವೆ. ಅವುಗಳನ್ನು ಕೆಡದಂತೆ ಸಂರಕ್ಷಿಸಿಡಲಾಗುತ್ತಿದೆಯಾದರೂ (ಎಂಬಾಮ್), ಗಾಯಗೊಂಡಿರುವ ದೇಹಗಳನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಮೃತಪಟ್ಟ 12 ಗಂಟೆಗಳ ಒಳಗಾಗಿ ಸಂರಕ್ಷಣೆ ಪ್ರಕ್ರಿಯೆ ನಡೆಸಿದರೆ ಮಾತ್ರ ಹಲವು ವರ್ಷಗಳ ಕಾಲ ದೇಹವನ್ನು ಕೆಡದಂತೆ ಸಂರಕ್ಷಿಸಿಡಬಹುದು. ಆದರೆ ಇಲ್ಲಿ ಹಾಗೆ ಮಾಡುವುದು ಅಸಾಧ್ಯ ಎನ್ನುತ್ತಿದ್ದಾರೆ ಏಮ್ಸ್ ವೈದ್ಯರು..