Advertisement
1998ರಿಂದ 2003ರ ಅವಧಿಯಲ್ಲಿ ಕಾಫಿ ಬೋರ್ಡ್‌ನ ಹಣಕಾಸು ವಿಭಾಗದ ನಿರ್ದೇಶಕಿಯಾಗಿದ್ದ ಶಾರದಾ ಸುಬ್ರಮಣಿಯಮ್ ಹಾಗೂ ಇತರೆ ಇಬ್ಬರು ಅಧಿಕಾರಿಗಳು ಕಾಫೀ ಬೋರ್ಡ್‌ನಲ್ಲಿದ್ದ 16.2 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಬೋರ್ಡ್‌ನ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಲ್ಲದೆ, ಸ್ವಂತಕ್ಕೆ ಲಾಭ ಪಡೆದುಕೊಂಡ ಆರೋಪ ಸಂಬಂಧ ಸಿಬಿಐ ಐವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಕಾಫಿಬೋರ್ಡ್‌ನ ಅಂದಿನ ನಿರ್ದೇಶಕಿಯಾಗಿದ್ದ ಶಾರದಾ ಸುಬ್ರಮಣಿಯಮ್ ಹಾಗೂ ಇತರೆ ಇಬ್ಬರು ಹಣಕಾಸು ವಿಭಾಗದ ಅಧಿಕಾರಿಗಳು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ನಿಯಮಾವಳಿಗಳನ್ನು ಉಲ್ಲಂ ಸಿ ಬೋರ್ಡ್‌ನಲ್ಲಿದ್ದ 16.2 ಕೋಟಿ ರೂ. ಹೆಚ್ಚುವರಿ ಮೊತ್ತವನ್ನು ಪ್ರಕರಣದ ನಾಲ್ಕನೇ ಆರೋಪಿ ಗುರುರಾಜ್ ಆಡಳಿತ ಪಾಲುದಾರರಾಗಿರುವ ಗ್ರೀನ್ ಹೋಮ್ಸ್ ಇಂಡಿಯಾ ಅಂಡ್ ಪ್ರೊಪ್ರೈಟರ್, ಜಿ.ಎಸ್.ಪೈನಾನ್ಷಿಯಲ್ ಸರ್ವೀಸಸ್ ಕಂಪೆನಿ ಸೇರಿದಂತೆ ಇತರೆ ಕಂಪೆನಿಗಳ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರು. ಈ ಅಕ್ರಮಕ್ಕೆ ಶಾರದಾ ಅವರ ಪತಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಂದಿನ ಆರ್ಥಿಕ ಸದಸ್ಯ ಸಂದೀಪ್ ದಾಸ್ ಸಾಥ್ ನೀಡಿದ್ದಾರೆ ಎಂದು ಸಿಬಿಐ ಶಂಕಿಸಿದೆ. ಈ ಅವ್ಯವಹಾರದಿಂದ ಕಾಫಿಬೋರ್ಡ್‌ನ ಬೊಕ್ಕಸಕ್ಕೆ ಅಧಿಕೃತವಾಗಿ 53.25 ಲಕ್ಷ ರೂ. ನಷ್ಟವುಂಟಾಗಿದೆ. ಅಲ್ಲದೆ, ಐವರೂ ಆರೋಪಿಗಳು ವೈಯಕ್ತಿಕವಾಗಿ ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಶಾರದಾ ಸುಬ್ರಮಣಿಯಮ್ ಪತಿ ಭಾರತೀಯ ಲೆಕ್ಕಪರಿಶೋಧನಾ ಸೇವೆ (ಐಸಿಎಎಸ್) ಅಧಿಕಾರಿಯಾಗಿರುವ ಸಂದೀಪ್ ದಾಸ್ ವಿರುದ್ಧ ಹಗರಣಗಳ ಸರಮಾಲೆಯೇ ಇದೆ. 1994ರಿಂದ 2004ರವರೆಗೆ ಬಿಡಿಎ ಆರ್ಥಿಕ ಸದಸ್ಯರಾಗಿದ್ದ ಸಂದೀಪ್ ದಾಸ್, ಬಿಡಿಎಯಲ್ಲಿದ್ದ 2000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸಿ ಅವ್ಯವಹಾರ ನಡೆಸಿದ್ದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿರುವ ಸಿಐಡಿ ಪೊಲೀಸರು, ಸಂದೀಪ್ ದಾಸ್‌ರನ್ನು 2015ರ ಆಗಸ್ಟ್‌ನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಆರೋಪಿ ಸಂದೀಪ್ ದಾಸ್ ಸೇರಿದಂತೆ ಇನ್ನಿತರರ ವಿರುದ್ಧ ಕಳೆದ ಫೆಬ್ರವರಿ ಅಂತ್ಯದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬೆಳವಣಿಗೆಗಳ ನಡುವೆ ಕೆಂದ್ರ ಹಣಕಾಸು ಇಲಾಖೆಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೀಪ್ ಅವರನ್ನು ಮೇ 5ರಂದು ಸೇವೆಯಿಂದ ವಜಾಗೊಳಿಸಲಾಗಿದೆ.
Advertisement
– ಮಂಜುನಥ್ ಲಗುಮೇನಹಳ್ಳಿ