ನವದೆಹಲಿ: 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಪುಲ್ ಬಂಗಾಶ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಸಿಬಿಐ ಶನಿವಾರ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 1,1984 ರಲ್ಲಿ ರಾಷ್ಟ್ರೀಯ ರಾಜಧಾನಿಯ ಪುಲ್ ಬಂಗಾಶ್ ಪ್ರದೇಶದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಮೂರು ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಕಳೆದ ತಿಂಗಳು ಟೈಟ್ಲರ್ ಅವರ ಧ್ವನಿ ಮಾದರಿಗಳನ್ನು ಸಂಗ್ರಹಿಸಿತ್ತು. ಸಂತ್ರಸ್ತರನ್ನು ಹತ್ಯೆ ಮಾಡಿದ ಗುಂಪನ್ನು ಪ್ರಚೋದಿಸಿದ ಆರೋಪ ಕಾಂಗ್ರೆಸ್ ನಾಯಕನ ಮೇಲಿದೆ.
ನಾನೇನು ಮಾಡಿದ್ದೇನೆ? ನನ್ನ ವಿರುದ್ಧ ಪುರಾವೆಗಳಿದ್ದರೆ, ನಾನು ನೇಣು ಹಾಕಿಕೊಳ್ಳಲು ಸಿದ್ಧನಿದ್ದೇನೆ … ಇದು 1984 ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿಲ್ಲ, ಆದರೆ ಅವರು , ಇನ್ನೊಂದು ಪ್ರಕರಣದಲ್ಲಿ ನನ್ನ ಧ್ವನಿಯನ್ನು (ಮಾದರಿ) ಬಯಸಿದ್ದರು ಎಂದು ಅವರು ಸಿಬಿಐನ ವಿಧಿವಿಜ್ಞಾನ ಪ್ರಯೋಗಾಲಯದಿಂದ ಹೊರಬರುವಾಗ ಟೈಟ್ಲರ್ ಹೇಳಿದರು.
2015ರ ಡಿಸೆಂಬರ್‌ನಲ್ಲಿ ನ್ಯಾಯಾಲಯವು ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.