Advertisement

ಸಿಬಿಐ- ಇಡಿ ತನಿಖೆಗೆ ಬಿಜೆಪಿ ಆಗ್ರಹ

11:14 PM Jun 11, 2019 | Team Udayavani |

ಬೆಂಗಳೂರು: ಐಎಂಎ ಜ್ಯುವೆಲ್ಲರ್ ಮಾಲೀಕ ನಾಪತ್ತೆ ಪ್ರಕರಣವನ್ನು ಸಿಬಿಐ ಸೇರಿ ಉನ್ನತ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿರುವ ಬಿಜೆಪಿಯು ಐಎಂಎ ಜುವೆಲ್ಲರ್ ಮಾಲೀಕರಿಗೆ ಉಗ್ರವಾದಿ ಸಂಘಟನೆಗಳೊಂದಿಗೆ ನಂಟಿರುವ ಶಂಕೆಯನ್ನೂ ವ್ಯಕ್ತಪಡಿಸಿದೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಐಎಂಎ ಜ್ಯುವೆಲ್ಲರ್ ಮಾಲೀಕನ ವಂಚನೆಯಿಂದ ಜನರಿಗೆ ಅನ್ಯಾಯವಾಗಿದ್ದು, ಕೂಡಲೇ ಹೂಡಿಕೆದಾರರಿಗೆ ಹಣ ವಾಪಸ್‌ ನೀಡಬೇಕು. ಶಾಸಕ ರೋಷನ್‌ ಬೇಗ್‌ ಇಲ್ಲವೇ ಮತ್ತೂಬ್ಬರ ಹೆಸರನ್ನು ನಾನು ಹೇಳಲು ಇಚ್ಛಿಸುವುದಿಲ್ಲ. ಯಾರೊಬ್ಬರ ಮೇಲೆ ಆರೋಪ ಮಾಡುವುದರ ಬದಲಿಗೆ ಜನರಿಗೆ ಹಣ ಹಿಂದಿರುಗಿಸಬೇಕು. ಮೊದಲಿಗೆ ಆ ಮಾಲೀಕನನ್ನು ಪತ್ತೆ ಹಚ್ಚುವ ಕೆಲಸ ಆಗಬೇಕು ಎಂದು ಹೇಳಿದರು.

ಇದಕ್ಕೆ ದನಿಗೂಡಿಸಿದ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್‌ ಅಜೀಂ, ಪೊಲೀಸರು ಯಾವ ಕಾರಣಕ್ಕೆ ಸ್ವಯಂ ಪ್ರೇರಿತರಾಗಿ ತನಿಖೆ ಮಾಡಲಿಲ್ಲ ಎಂದು ಅರ್ಥವಾಗುತ್ತಿಲ್ಲ. ದಾವಣಗೆರೆಯಲ್ಲೂ ಹಗರಣ ನಡೆದಿದೆ. ಅಲ್ಲಿಯೂ ಸುಮಾರು 4000 ಮಂದಿಗೆ ಮೋಸವಾಗಿದೆ. ಒಟ್ಟಾರೆ 3 ಲಕ್ಷ ಮಂದಿಗೆ ಮೋಸವಾಗಿದೆ. ಕೇವಲ ಐದು ಪೊಲೀಸ್‌ ತಂಡದಿಂದ ತನಿಖೆ ನಡೆಸಲು ಸಾಧ್ಯವಾಗದು. ಪ್ರಕರಣವನ್ನು ಸಿಬಿಐ ಇಲ್ಲವೇ ಜಾರಿ ನಿರ್ದೇಶನಾಲಯ (ಇಡಿ) ವತಿಯಿಂದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಉಗ್ರರ ನಂಟು ಶಂಕೆ: ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಪಿಎಫ್ಐ ಸಂಘಟನೆಗೆ ಐಎಂಎ ಜುವೆಲ್ಲರ್ ಆರ್ಥಿಕ ನೆರವು ನೀಡಿದೆ ಎಂದು ಕೇರಳದ ವ್ಯಕ್ತಿಯೊಬ್ಬರು ಹೇಳಿದ್ದರು. ಮನ್ಸೂರ್‌ ಖಾನ್‌ಗೆ ಭಯೋತ್ಪಾದಕರೊಂದಿಗೆ ನಂಟಿರುವ ಶಂಕೆ ಇದೆ. ಇಷ್ಟು ದೊಡ್ಡ ಮೊತ್ತದ ಹಣ ಅವರ ಬಳಿ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಶಾಸಕ ಆರ್‌.ರೋಷನ್‌ ಬೇಗ್‌, ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಹೆಸರು ಕೇಳಿ ಬರುತ್ತಿದ್ದು, ಇವರ ಆಸ್ತಿ ಜಪ್ತಿ ಮಾಡಬೇಕು. ಪ್ರಕರಣವನ್ನು ಸಿಬಿಐ ಇಲ್ಲವೇ ಇಡಿಗೆ ವಹಿಸಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next