ಹೊಸದಿಲ್ಲಿ: ನಾಲ್ಕು ವರ್ಷಗಳಲ್ಲಿ ಸಿಬಿಐ 108 ಪ್ರಕರಣಗಳ ತನಿಖೆ ನಡೆಸುವ ವೇಳೆ ಒಟ್ಟು 894 ಶೆಲ್ ಕಂಪೆನಿಗಳನ್ನು ಪತ್ತೆಹಚ್ಚಿದೆ ಎಂದು ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ ತನಿಖಾ ಸಂಸ್ಥೆಯು 104 ನಕಲಿ ಕಂಪೆನಿಗಳ ವಿರುದ್ಧ 30 ಕೇಸುಗಳನ್ನು ದಾಖಲಿಸಿದೆ ಎಂದೂ ಅವರು ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.
108 ಪ್ರಕರಣಗಳ ಪೈಕಿ 72 ಕೇಸುಗಳ ಆರೋಪಪಟ್ಟಿ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಇದೇ ವೇಳೆ, ಕಾರ್ಪೊರೇಟ್ ತೆರಿಗೆ ಕಡಿತಕ್ಕೆ ಸಂಬಂಧಿಸಿದ ತೆರಿಗೆ ಕಾನೂನು (ತಿದ್ದುಪಡಿ) ವಿಧೇಯಕ 2019 ಅನ್ನು ಲೋಕಸಭೆಯಲ್ಲಿ ಸೋಮವಾರ ನಿರ್ಮಲಾ ಮಂಡಿಸಿದ್ದಾರೆ.
1996 ಕೋಟಿ ಸಂಗ್ರಹ: ಸರಕಾರಿ ಸ್ವಾಮ್ಯದ ಬ್ಯಾಂಕುಗಳು 2018-19ರಲ್ಲಿ ತಮ್ಮ ತಮ್ಮ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳದೇ ಇದ್ದ ಖಾತೆದಾರರಿಂದ ದಂಡದ ಮೊತ್ತವಾಗಿ 1996.46 ಕೋಟಿ ರೂ.ಗಳನ್ನು ಸಂಗ್ರಹಿಸಿವೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. 2017-18ರಲ್ಲಿ ಈ ಮೊತ್ತ 3,368.42 ಕೋಟಿ ರೂ. ಆಗಿತ್ತು ಎಂದೂ ತಿಳಿಸಿದ್ದಾರೆ. ಈ ನಡುವೆ, ಮುಲ್ಲಪೆರಿಯಾರ್ ಅಣೆಕಟ್ಟಿನ ಸಂಪೂರ್ಣ ನಿಯಂತ್ರಣ ಮತ್ತು ನಿರ್ವಹಣೆಯ ಹೊಣೆಯನ್ನು ತಮಿಳುನಾಡು ಸರಕಾರವೇ ಹೊಂದಿರಲಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾಹಿತಿ ನೀಡಿದ್ದಾರೆ.
ಎಸ್‌ಪಿಜಿ ವಿಧೇಯಕ ಮಂಡನೆ: ಮಾಜಿ ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ಅವರೊಂದಿಗೇ ಕುಟುಂಬ ಸದಸ್ಯರು ವಾಸಿಸದೇ ಇದ್ದರೆ, ಅಂಥವರಿಗೆ ಇನ್ನು ಎಸ್‌ಪಿಜಿ ಕಮಾಂಡೋಗಳ ಭದ್ರತೆ ಒದಗಿಸಲಾಗುವುದಿಲ್ಲ. ಯಾರು ಮಾಜಿ ಪ್ರಧಾನಿಯ ಅಧಿಕೃತ ನಿವಾಸದಲ್ಲೇ ಇರುತ್ತಾರೋ ಅವರಿಗೆ 5 ವರ್ಷಗಳ ಕಾಲ ಮಾತ್ರ ಎಸ್‌ಪಿಜಿ ಭದ್ರತೆ ಇರುತ್ತದೆ ಎಂಬ ಅಂಶಗಳಿರುವ ಎಸ್‌ಪಿಜಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಹೊಸ ಉಡುಗೆಗೆ ಕೊಕ್!: ರಾಜ್ಯಸಭೆಯ ಮಾರ್ಷಲ್‌ಗಳಿಗೆ ಒದಗಿಸಲಾದ ಸೇನಾ ಮಾದರಿ ಹೊಸ ಸಮವಸ್ತ್ರಗಳ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ ಆ ಉಡುಗೆಗೆ ಕೊಕ್ ನೀಡಲಾಗಿದೆ.