ಅಮರಾವತಿ:ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ (ನವೆಂಬರ್ 20) ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಸುಮಾರು 25 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದರಲ್ಲಿ ಟಿಡಿಪಿ ಮುಖಂಡ, ಗುರಾಝಾಲಾ ಕ್ಷೇತ್ರದ ಮಾಜಿ ಶಾಸಕ ಯರಪತಿನೇನಿ ಶ್ರೀನಿವಾಸ್ ರಾವ್ ಹಾಗೂ ಇತರರ ಮನೆ, ಕಚೇರಿ ಸೇರಿರುವುದಾಗಿ ವರದಿ ತಿಳಿಸಿದೆ.
ಮನೆ ಮತ್ತು ಕಚೇರಿಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಸಿಬಿಐ ತಂಡ ಮಹತ್ವದ ಮಾಹಿತಿಯನ್ನೊಳಗೊಂಡ ದಾಖಲೆ, ಮೊಬೈಲ್ ಫೋನ್ ಗಳು ಹಾಗೂ ನಗದನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದೆ.
ಗುಂಟೂರು ಜಿಲ್ಲೆ ಹಾಗೂ ಹೈದರಾಬಾದ್ ನ ಸುಮಾರು 25 ಸ್ಥಳಗಳಲ್ಲಿ ಸಿಬಿಐ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದೆ. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಆಂಧ್ರಪ್ರದೇಶ ಸಿಬಿ-ಸಿಐಡಿ ಮಾಡಿಕೊಂಡ ಮನವಿ ಮೇರೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ರವಾನಿಸಿದ್ದು, ಅದನ್ನು ಅಂಗೀಕರಿಸಿದ ನಂತರ ಸಿಬಿಐ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು ಎಂದು ವರದಿ ಹೇಳಿದೆ.
17 ಮಂದಿ ಆರೋಪಿಗಳು ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಕೋನಾಂಕಿ ಗ್ರಾಮದ ಪಿಡುಗುರಾಲ್ಲಾ ಮಂಡಲ್, ಕೇಸಾನುಪಲ್ಲಿ ಮತ್ತು ದಾಚೇಪಲ್ಲಿ ಮಂಡಲ್ ನ ನಾಡಿಕುಡಿ ಹಾಗೂ ಗುಂಟೂರು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸುಣ್ಣದ ಕಲ್ಲಿನ ಸಾಗಾಣೆ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.