ಹೊಸದಿಲ್ಲಿ : ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಕೇಂದ್ರ ಸರಕಾರ ತನ್ನ ವಿರುದ್ದ ಕೈಗೊಂಡಿರುವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಕೇಂದ್ರ ಜಾಗೃತ ಆಯೋಗ ನಡೆಸಿದ ತನಿಖೆಯ ವಿವರ ಮತ್ತು ವರ್ಮಾ ಅವರ ಉತ್ತರ ಮಾಧ್ಯಮಕ್ಕೆ ಸೋರಿಕೆಯಾಗಿ ನ್ಯೂಸ್ ವೆಬ್ ಸೈಟ್ ಒಂದರಲ್ಲಿ ಅದು ಪ್ರಕಟಗೊಂಡಿರುವುದಕ್ಕೆ ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯನ್ನು ನ.29ಕ್ಕೆ ನಿಗದಿಸಿದೆ.
ಸಿವಿಸಿ ವರದಿ ಮತ್ತು ವರ್ಮಾ ಅವರ ಉತ್ತರ ಸೋರಿಕೆಯಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಮೂವರು ನ್ಯಾಯಾಧೀಶರು ಪೀಠ, ವರ್ಮಾ ಅವರ ವಕೀಲರು ನಿನ್ನೆ ಸೋಮವಾರ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿರುವುದಕ್ಕೆ ಹೆಚ್ಚುವರಿ ಸಮಾಯಾವಕಾಶ ಕೋರಿದ್ದಾರೆ ಎಂದು ಬೆಟ್ಟು ಮಾಡಿತು.
ವರ್ಮಾ ಪರವಾಗಿ ಕೋರ್ಟಿನಲ್ಲಿ ಹಾಜರಿದ್ದ ಹಿರಿಯ ವಕೀಲ ಫಾಲಿ ನಾರಿಮನ್ ಅವರು ತಮ್ಮ ಕಕ್ಷಿದಾರರು ಹೆಚ್ಚುವರಿ ಕಾಲಾವಕಾಶ ಕೇಳಿಲ್ಲ ಎಂದು ಹೇಳಿದರು.
ಇದರಿಂದ ಕೋಪಗೊಂಡ ಸಿಜೆಐ, ನೀವು ಯಾರೂ ವಿಚಾರಣೆಗೆ ಅರ್ಹರೆಂದು ನಾವು ತಿಳಿಯುವುದಿಲ್ಲ ಎಂದು ಹೇಳಿದರು. ವರ್ಮಾ ಅವರ ಉತ್ತರ ಮತ್ತು ಸಿವಿಸಿ ತನಿಖಾ ವರದಿ ಸೋರಿ ಹೋಗಿರುವುದಕ್ಕೆ ನಾರಿಮನ್ ಕೂಡ ಆಘಾತ ವ್ಯಕ್ತಪಡಿಸಿದರು.