Advertisement

ಸಿಬಿಐ ಕುಣಿಕೆಯಲ್ಲಿ ಲಾಲು ಯಾದವ್‌

09:50 AM Jul 08, 2017 | |

ಹೊಸದಿಲ್ಲಿ: ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರಿಗೀಗ ಮತ್ತೂಂದು ಸಂಕಷ್ಟ ಬಂದೊದಗಿದೆ. ಲಾಲು ಅವರು ರೈಲ್ವೆ ಸಚಿವರಾಗಿದ್ದ ವೇಳೆ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಸಿಬಿಐ ಲಾಲು ಮತ್ತು ಅವರ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ನಿವಾಸಗಳ ಮೇಲೆ ದಾಳಿ ನಡೆಸಿದೆ. 

Advertisement

ಪಟ್ನಾ, ರಾಂಚಿ, ಭುವನೇಶ್ವರ, ಗುರುಗ್ರಾಮ ಸೇರಿದಂತೆ ಒಟ್ಟು 12 ಕಡೆ ಶುಕ್ರವಾರ ಸಿಬಿಐ ದಾಳಿ ನಡೆದಿದೆ. ಪ್ರಕರಣ ಸಂಬಂಧ ಕ್ರಿಮಿನಲ್‌ ಸಂಚು ಮತ್ತು ವಂಚನೆ ನಡೆಸಿದ ಬಗ್ಗೆ ಲಾಲು, ಅವರ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ, ಕೇಂದ್ರದ ಮಾಜಿ ಸಚಿವ ಪ್ರೇಮ್‌ ಚಂದ್‌ ಗುಪ್ತಾ ಅವರ ಪತ್ನಿ ಸರಳಾ ಗುಪ್ತ ಎಂಬುವವರ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರೊಂದಿಗೆ ಮತ್ತಿಬ್ಬರ ಹೆಸರನ್ನೂ ಹೆಸರಿಸಲಾಗಿದೆ. ಸಿಬಿಐ ದಾಳಿ ಬಗ್ಗೆ ಲಾಲು ಅವರು ಕೆಂಡ ಕಾರಿದ್ದು, ಇದರ ಹಿಂದೆ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ಏನಿದು ಪ್ರಕರಣ?: ಲಾಲು ಅವರು 2006ರಲ್ಲಿ ರೈಲ್ವೆ ಸಚಿವರಾಗಿದ್ದ ವೇಳೆ ರೈಲ್ವೇ ಹೋಟೆಲ್‌ ನಿರ್ವಹಣೆಯನ್ನು ಸರಳ ಗುಪ್ತಾ ಅವರಿಗೆ ಸೇರಿದ ಸುಜಾತಾ ಹೊಟೇಲ್‌ಗೆ ನೀಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಪಟ್ನಾದಲ್ಲಿ ಮೂರು ಎಕರೆ ಭೂಮಿಯನ್ನು ಕಿಕ್‌ಬ್ಯಾಕ್‌ ಆಗಿ ಪಡೆದುಕೊಂಡಿದ್ದರು. ಬಿಡ್ಡಿಂಗ್‌ ವೇಳೆ 15 ಬಿಡ್ಡರ್‌ಗಳ ಹೆಸರುಗಳು ಇದ್ದರೂ, ಸುಜಾತಾ ಹೊರತುಪಡಿಸಿ ಬೇರಾವುದೇ ಬಿಡ್ಡರುಗಳ ದಾಖಲೆಗಳು ಇರಲಿಲ್ಲ. 15 ವರ್ಷದ ಗುತ್ತಿಗೆಯನ್ನು ಸುಜಾತಾ ಹೋಟೆಲ್‌ಗೇ ನೀಡಲಾಗಿತ್ತು. ಅದೇ ದಿನ ಭೂಮಿಯನ್ನು ಲಾಲು ಅವರ ಪುತ್ರನ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳ ಲಾಗಿತ್ತು. ಈ ಭೂಮಿಯನ್ನು ಕೋಟ್ಯಂತರ ರೂಪಾಯಿ ಮಾರುಕಟ್ಟೆ ಬೆಲೆ ಬದಲಿಗೆ ಕೃಷಿ ಭೂಮಿ ಎಂದು ಹೇಳಿ ಕೇವಲ 64 ಲಕ್ಷ ರೂ.ಗೆ ಕೊಳ್ಳಲಾಗಿತ್ತು. ಇದರಲ್ಲೀಗ ಮಾಲ್‌ ಒಂದನ್ನು ಲಾಲು ಕುಟುಂಬ ನಿರ್ಮಿಸುತ್ತಿದೆ. 

ಕೇಂದ್ರದಿಂದ ಪ್ರತೀಕಾರದ ಕ್ರಮ-ಆರ್‌ಜೆಡಿ: ವಿಪಕ್ಷಗಳ ದನಿಯನ್ನು ಹತ್ತಿಕ್ಕಲು ಲಾಲು ಮತ್ತು ಅವರ ಕುಟುಂಬದ ವಿರುದ್ಧ ಕೇಂದ್ರ ಸರಕಾರ ಪ್ರತೀಕಾರದ ಕ್ರಮ ಕೈಗೊಳ್ಳುತ್ತಿದೆ ಎಂದು ಆರ್‌ಜೆಡಿ ಆರೋಪಿಸಿದೆ. ಬಿಜೆಪಿ ವಿರುದ್ಧ ಲಾಲು ಅವರು “ದೇಶ್‌ ಬಚಾವೋ, ಭಾಜಪಾ ಹಠಾವೋ’ ಆಂದೋಲನವನ್ನು ಆ.27ರಿಂದ ನಡೆಸುವುದಾಗಿ ಘೋಷಿಸಿದ್ದು, ಅದಾದ ಬಳಿಕ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರ್‌ಜೆಡಿ ಬಿಹಾರದ ಅಧ್ಯಕ್ಷ ರಾಮಚಂದ್ರ ಪುರ್ಬೆ ಹೇಳಿದ್ದಾರೆ. 

ಸಿಬಿಐ ದಾಳಿ ನಿತೀಶ್‌ಗೆ ಗೊತ್ತಿತ್ತು!
ಲಾಲು, ಪುತ್ರ ತೇಜಸ್ವಿ ಅವರ ನಿವಾಸಗಳಿಗೆ ಸಿಬಿಐ ದಾಳಿ ನಡೆಸುವ ಬಗ್ಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರಿಗೆ ಮೊದಲೇ ಗೊತ್ತಿತ್ತು! ಬಿಹಾರದ ಆರ್‌ಜೆಡಿ, ಜೆಡಿಯು ಮೈತ್ರಿಕೂಟದ ಸರಕಾರದ ಮುಖ್ಯಸ್ಥರಾಗಿರುವ ನಿತೀಶ್‌ಗೆ ಪ್ರಧಾನಿ ಮೋದಿ ಅವರ ಕಚೇರಿಯಿಂದಲೇ ಈ ಬಗ್ಗೆ ಸುದ್ದಿ ಹೋಗಿತ್ತು. ದಾಳಿಯಿಂದಾಗಿ ಆರ್‌ಜೆಡಿ ಕಾರ್ಯಕರ್ತರಿಂದ ಹಿಂಸಾಚಾರ ಸ್ಫೋಟಗೊಳ್ಳುವ ಸಾಧ್ಯತೆ ಇದ್ದುದರಿಂದ ಈ ಮಾಹಿತಿಯನ್ನು ಮೊದಲೇ ತಿಳಿಸಲಾಗಿತ್ತು ಎಂದು ಬಿಹಾರ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.

Advertisement

ಸಿಬಿಐ ದಾಳಿಯು ನನ್ನ ವಿರುದ್ಧ ಬಿಜೆಪಿ ನಡೆ ಸಿದ ಷಡ್ಯಂತ್ರ. ನಾನು ಯಾವ ತಪ್ಪನ್ನೂ ಮಾಡಿ ಲ್ಲ. ಯಾವುದೇ ರೀತಿಯ ತನಿಖೆಗೂ ಸಿದ್ಧನಿದ್ದೇನೆ.
ಲಾಲು ಪ್ರಸಾದ್‌, ಆರ್‌ಜೆಡಿ ಮುಖ್ಯಸ್ಥ

ದಾಳಿಯಲ್ಲಿ ಸರಕಾರ ಅಥವಾ ಬಿಜೆಪಿಯ ಯಾವುದೇ ಪಾತ್ರವಿಲ್ಲ. ಆರೋಪವಿದ್ದ ಮೇಲೆ ತನಿಖೆ ಮಾಡುವುದು ಬೇಡವೇ? ಸಿಬಿಐ ಅದರ ಕೆಲಸ ಮಾಡುತ್ತಿದೆ. ಸರಕಾರ ತಲೆಹಾಕಲ್ಲ.
ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಇದೀಗ ಕೇಂದ್ರದ ಎನ್‌ಡಿಎ ಸರಕಾರದ ಕೈಗೊಂಬೆಗಳಾಗಿವೆ. ರಾಜಕೀಯ ವೈರಿಗಳ ವಿರುದ್ಧ ಪ್ರತೀಕಾರ ತೀರಿಸಲು ಬಳಸಿಕೊಳ್ಳಲಾಗುತ್ತಿದೆ.
ರಣದೀಪ್‌ ಸುಜೇವಾಲಾ,ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next