ನವದೆಹಲಿ: ಸರಕುಗಳನ್ನು ಪಡೆಯಲು ಖಾಸಗಿ ಕಂಪನಿಗೆ ಅನುಮತಿ ನೀಡಲು ಲಂಚ ಸ್ವೀಕರಿಸಿದ ಮೂವರು ಕಸ್ಟಮ್ಸ್ ಅಧಿಕಾರಿಗಳನ್ನು ಸಿಬಿಐ ಬುಧವಾರ(ಮೇ 19) ನವದೆಹಲಿಯ ತುಘಲಕಾಬಾದ್ ನಲ್ಲಿ ಬಂಧಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಗೆ ಮುಖ್ಯಮಂತ್ರಿ ಚಾಲನೆ
ಕಸ್ಟಮ್ಸ್ ಮತ್ತು ಆಮದು ಇಲಾಖೆಯ ಹಿರಿಯ ಇಂಟೆಲಿಜೆನ್ಸ್ ಅಧಿಕಾರಿಗಳಾದ ಸುರೇಂದ್ರ ಸಿಂಗ್, ಅಜೀತ್ ಕುಮಾರ್ ಮತ್ತು ಇಂಟೆಲಿಜೆನ್ಸ್ ಇನ್ಸ್ ಪೆಕ್ಟರ್ ಸಂದೀಪ್ ರಾತಿ ತುಘಲಕಾಬಾದ್ ನಲ್ಲಿ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಸಿಬಿಐ ಬಲೆಗೆ ಬಿದ್ದಿರುವುದಾಗಿ ವರದಿ ಹೇಳಿದೆ.
ಖಾಸಗಿ ಕಂಪನಿಗೆ ಸೇರಿದ ದೂರುದಾರ ನೀಡಿದ ದೂರನ್ನು ದಾಖಲಿಸಿಕೊಂಡಿದ್ದು, ತನ್ನ ಕಂಪನಿ ಆಮದುಮಾಡಿಕೊಂಡಿದ್ದ ಟಿವಿ ಸ್ಕ್ರೀನ್ ಗಳ ಸರಕು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಹೆಚ್ಚುವರಿಯಾಗಿ ಕಳೆದ ನಾಲ್ಕು ತಿಂಗಳಿನಿಂದ ಸರಕು ಕಂಟೈನರ್ ಕ್ಲಿಯರ್ ಮಾಡಿದ್ದಕ್ಕೆ 50 ಸಾವಿರ ರೂ. ಲಂಚ ಪಡೆದಿರುವುದಾಗಿ ತಿಳಿಸಿದ್ದಾರೆ.
ಕೊನೆಗೆ ಆರೋಪಿಗಳು ಕಂತು ಪ್ರಕಾರ 10 ಲಕ್ಷ ರೂಪಾಯಿ ಲಂಚ ಪಡೆಯಲು ಒಪ್ಪಿಗೆ ಸೂಚಿಸಿದ್ದು, ಅದರಂತೆ ಮೊದಲ ಕಂತಿನ ನಾಲ್ಕು ಲಕ್ಷ ರೂಪಾಯಿ ಪಾವತಿಸಲಾಗಿತ್ತು ಎಂದು ವರದಿ ಹೇಳಿದೆ. ದೂರಿನ ಆಧಾರದ ಮೇಲೆ ಮೊದಲ ಕಂತಿನ ನಾಲ್ಕು ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.