ಮಡಿಕೇರಿ: ಕೊಡಗಿನ ಪರಿಸರ ಉಳಿಸುವ ಉದ್ದೇಶದಿಂದ ಮರ ಕಡಿತಲೆ ಮತ್ತು ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್ ಅವರಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ಕಾವೇರಿ ಸೇನೆ ಸಂಚಾಲಕ ಕೆ.ಎ. ರವಿ ಚಂಗಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 17ರಂದು ಬೆಂಗಳೂರಿ ನಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ನಿವೃತ್ತ ಮೇಜರ್ ಜನರಲ್ ಕೊಡಂದೇರ ಅರ್ಜುನ್ ಮುತ್ತಣ್ಣ, ಬಿಜೆಪಿಯ ತೇಲಪಂಡ ಶಿವ ಕುಮಾರ್ ನಾಣಯ್ಯ, ಚೇಂದ್ರಿಮಾಡ ಗಿರೀಶ್ ದೇವಯ್ಯ ಹಾಗೂ ತಾವು ಜಿಲ್ಲೆಯಲ್ಲಿ ಆಗುತ್ತಿರುವ ಪರಿಸರ ನಾಶದ ಬಗ್ಗೆ ಮನ ವರಿಕೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಅವ್ಯಾಹತ ಮರಗಳ ಹನನ ಮತ್ತು ಕಾವೇರಿ ನದಿ ಹಾಗೂ ಅವುಗಳ ಉಪನದಿಗಳ ಪಾತ್ರದಲ್ಲಿ ನಡೆಯುತ್ತಿರುವ ಅನಧಿಕೃತ ಮರಳು ದಂಧೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಮಳೆಯ ಪ್ರಮಾಣ ಕೂಡ ಕುಸಿಯುತ್ತಿದ್ದು, ಡಿಸೆಂಬರ್ ತಿಂಗಳಿನಲ್ಲಿಯೇ ಜೀವನದಿ ಕಾವೇರಿ ಬರಡಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ಸಂಖ್ಯೆಯ ಮರಗಳನ್ನು ಕಡಿಯಲಾಗಿದೆ. ಉದ್ದೇಶಿತ ಕೇರಳ ಮೈಸೂರು ರೈಲು ಮಾರ್ಗ ಹಾಗೂ ಚತುಷ್ಪಥ ಹೆದ್ದಾರಿ ಯೋಜನೆಗಳಿಂದ ಪರಿಸರ ನಾಶವಾಗಲಿದೆ. ಈ ಕಾರಣದಿಂದ ಎರಡೂ ಯೋಜನೆಗಳಿಗೆ ಅನುಮತಿ ನೀಡಬಾರದೆಂದು ಸಚಿವರಲ್ಲಿ ಒತ್ತಾಯಿಸಿರುವುದಾಗಿ ರವಿ ಚಂಗಪ್ಪ ತಿಳಿಸಿ, ಜಿಲ್ಲೆಯ ಗಡಿಭಾಗವಾದ ಕುಶಾಲನಗರದವರೆಗೆ ರೈಲ್ವೆ ಸಂಪರ್ಕ ಕಲ್ಪಿಸುವುದಕ್ಕೆ ತಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ಕೊರತೆ ಎದುರಾಗುತ್ತಿದ್ದು, ಕಾವೇರಿ ನದಿಗೆ ಕಂಟಕ ಎದುರಾದರೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳು ಕೂಡ ಕುಡಿಯುವ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ ಎಂದರು. ಜಿಲ್ಲೆಯ ಲಕ್ಷಾಂತರ ಎಕರೆ ಭತ್ತದ ಗದ್ದೆಗಳು ಪಾಳು ಬಿದ್ದಿದ್ದು, ಅಂತರ್ಜಲ ಮಟ್ಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಪಾಳು ಬಿದ್ದಿರುವ ಭತ್ತದ ಗದ್ದೆಗಳನ್ನು ಪುನಶ್ಚೇತನಗೊಳಿಸಲು ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೆ ತರಬೇಕು. ಜಿಲ್ಲೆಯಾದ್ಯಂತ ಒತ್ತುವರಿಯಾಗಿರುವ ಅರಣ್ಯ ಪ್ರದೇಶ, ದೇವರಕಾಡು, ಗೋಮಾಳ, ಊರುಡುವೆ ಜಾಗಗಳನ್ನು ತೆರವುಗೊಳಿಸಬೇಕು. ನದಿ ದಂಡೆಯ ಅಕ್ರಮ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು, ಅರಣ್ಯವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಬೇಕು. ಕೃಷಿ ಭೂಮಿಯನ್ನು ಕೃಷಿಯೇತರವೆಂದು ಪರಿವರ್ತನೆಗೊಳಿಸುವುದನ್ನು ನಿಷೇಧಿಸಬೇಕೆಂದು ಕೇಂದ್ರ ಪರಿಸರ ಖಾತೆ ಸಚಿವರಲ್ಲಿ ಮನವಿ ಮಾಡಿಕೊಂಡಿರುವುದಾಗಿ ರವಿ ಚಂಗಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಘು ಮಾಚಯ್ಯ, ಸೋಮವಾರಪೇಟೆ ಅಧ್ಯಕ್ಷ ಹೊಸಬೀಡು ಶಶಿ ಹಾಗೂ ದಿವಾಕರ್ ಉಪಸ್ಥಿತರಿದ್ದರು.
ನಮ್ಮೊಳಗಿನ ಶತ್ರುಗಳಿಂದ ಸೋಲು
ಹೈಟೆನ್ಶನ್ ವಿದ್ಯುತ್ ಮಾರ್ಗದ ವಿರುದ್ಧದ ಹೋರಾಟ ವಿಫಲಗೊಳ್ಳಲು ನಮ್ಮೊಳಗಿನ ಶತ್ರುಗಳೆ ಕಾರಣವೆಂದು ರವಿ ಚಂಗಪ್ಪ ಆರೋಪಿಸಿದ್ದಾರೆ. ಶಾಸಕರು ಮತ್ತು ಕೆಲವು ಜನಪ್ರತಿನಿಧಿಗಳು ವಿದ್ಯುತ್ ಮಾರ್ಗದ ಪರವಾಗಿದ್ದರು. ನಮ್ಮ ಪರವಾಗಿ ರಾಜಕೀಯ ಲಾಬಿ ನಡೆಯಲಿಲ್ಲ. ರೈತ ಸಂಘ ಕೂಡ ಹೋರಾಟದ ಪರವಾಗಿ ನಿಲ್ಲಲಿಲ್ಲ. ಕೇರಳ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಪ್ರಭಾವದಿಂದ ಕಾವೇರಿ ಸೇನೆೆಯ ಹೋರಾಟ ಹತ್ತಿಕ್ಕಲಾಯಿತು. ಕೇರಳದ ಮೇಲೆ ಹೆಚ್ಚು ಅಭಿಮಾನ ಹೊಂದಿರುವ ಸಚಿವ ಕೆ.ಜೆ. ಜಾರ್ಜ್ ಅವರು ಅಂದು ಗೃಹ ಸಚಿವರಾಗಿದ್ದ ಕಾರಣ ಪೊಲೀಸ್ ಬಲವನ್ನು ಬಳಸಿ ನಮ್ಮ ಹೋರಾಟವನ್ನು ಹತ್ತಿಕ್ಕಿದರು ಎಂದು ಆರೋಪಿಸಿದರು. ಇನ್ನು ಮುಂದೆ ಯಾವುದೇ ಸರ್ಕಾರವನ್ನು ನಂಬಿ ಕೂರುವುದಿಲ್ಲ. ಕಾವೇರಿ ಸೇನೆ ತನ್ನದೇ ಆದ ರೀತಿಯಲ್ಲಿ ಹೋರಾಟ ನಡೆಸಲಿದ್ದು, ಕಾನೂನಿನ ಹೋರಾಟಕ್ಕೂ ಸಿದ್ಧವಿರುವುದಾಗಿ ರವಿ ಚಂಗಪ್ಪ ಸ್ಪಷ್ಟಪಡಿಸಿದರು.