Advertisement

21, 22ರಂದು ಚುಂಚನಕಟ್ಟೆಯಲ್ಲಿ ಕಾವೇರಿ ಜಲಪಾತೋತ್ಸವ

09:30 PM Sep 17, 2019 | Lakshmi GovindaRaju |

ಕೆ.ಆರ್‌.ನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಲೂಕಿನ ಚುಂಚನಕಟ್ಟೆ ಹೋಬಳಿ ಕೇಂದ್ರದಲ್ಲಿ ಸೆ.21 ಮತ್ತು 22ರಂದು ಕಾವೇರಿ ಜಲಪಾತೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಂ.ಜಿ.ಶಂಕರ್‌ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಕಾರ್ಯಕ್ರಮ ನಡೆಯುವ ಎರಡು ದಿನಗಳ ಕಾಲ ಅಂದಾಜು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಯಾವುದೇ ಲೋಪವಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

Advertisement

ದೀಪಾಲಂಕಾರ: ಪ್ರವಾಸಿಗರಿಗೆ ಸಮರ್ಪಕವಾಗಿ ಆಸನದ ವ್ಯವಸ್ಥೆ ಮಾಡುವುದರ ಜತೆಗೆ ದೀಪಾಲಂಕಾರ, ಕುಡಿಯುವ ನೀರು, ಸಾರಿಗೆ, ಸ್ವತ್ಛತೆ ಮತ್ತು ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಆದೇಶ ನೀಡಿದ ಜಿಲ್ಲಾಧಿಕಾರಿಗಳು, ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಿತ್ಯ ಸ್ಥಳ ಪರಿಶೀಲಿಸಿ: ಜಲಪಾತೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದಲ್ಲದೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಆಗಮಿಸಲಿದ್ದು ಈ ಸಂದರ್ಭದಲ್ಲಿ ವಾಹನ ಮತ್ತು ಜನರ ನಿಯಂತ್ರಣಕ್ಕೆ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದ ಅಭಿರಾಂ.ಜಿ.ಶಂಕರ್‌ ನಾಳೆಯಿಂದಲೇ ನಿತ್ಯ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಪೊಲೀಸರಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಸೆ.21ರಂದು ಶನಿವಾರ ಸಂಜೆ 6 ಗಂಟೆಗೆ ಚುಂಚನಕಟ್ಟೆಯ ಶ್ರೀರಾಮ ದೇವಾಲಯದ ಮುಂಭಾಗ ನೂತನವಾಗಿ ನಿರ್ಮಾಣ ಮಾಡಿರುವ ಜಲಪಾತೋತ್ಸವ ಕಾರ್ಯಕ್ರಮದ ಶಾಶ್ವತ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಶಾಸಕ ಸಾ.ರಾ. ಮಹೇಶ್‌, ಚಿತ್ರ ನಟ ಲೂಸ್‌ಮಾದ ಯೋಗಿ ಇತರರು ಭಾಗವಹಿಸಲಿದ್ದಾರೆ ಎಂದರು.

ಸಮಸ್ಯೆ ಪರಿಹರಿಸಿ: ತಾಲೂಕಿನ ಚುಂಚನಕಟ್ಟೆ ನಾಡ ಕಚೇರಿಯಲ್ಲಿ ಪ್ರತಿ ಬುಧವಾರ ಕಚೇರಿಯ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಸಾರ್ವಜನಿಕರ ದೂರು ದುಮ್ಮಾನಗಳನ್ನು ಅಲಿಸಿ ಪರಿಹರಿಸುವ ಕೆಲಸವನ್ನು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಅಭಿರಾಂ.ಜಿ.ಶಂಕರ್‌ ತಾಕೀತು ಮಾಡಿದರು.

Advertisement

ತಹಶೀಲ್ದಾರ್‌ ಹೊಣೆ: ಜಲಪಾತೋತ್ಸವ‌ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ನಾಡ ಕಚೇರಿ ಸಿಬ್ಬಂದಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಆದೇಶ ನೀಡಿದ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಮತ್ತೆ ದೂರು ಕೇಳಿ ಬಂದರೆ ತಹಶೀಲ್ದಾರ್‌ರನ್ನು ಹೊಣೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕುಪ್ಪೆ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರ್‌, ತಾಪಂ ಇಒ ಗಿರೀಶ್‌, ಲೋಕೋಪಯೋಗಿ ಇಇ ಕಿಶೋರ್‌ಚಂದ್ರ, ಎಇಇ ಅರುಣ್‌ಕುಮಾರ್‌, ಎಂಜಿನಿಯರ್‌ಗಳಾದ ಮೋಹನ್‌, ಶಿವಪ್ಪ, ಸೆಸ್ಕ್ ಎಇಇ ಅರ್ಕೇಶ್‌ಮೂರ್ತಿ, ಅಬಕಾರಿ ಉಪನಿರೀಕ್ಷಕಿ ಹೆಚ್‌.ಡಿ.ರಮ್ಯಾ, ತಾಲೂಕು ಆರೋಗ್ಯಾಧಿಕಾರಿ ಮಹೇಂದ್ರಪ್ಪ, ಉಪ ತಹಶೀಲ್ದಾರ್‌ ಮೋಹನ್‌ ಮತ್ತಿತರರು ಹಾಜರಿದ್ದರು.

ಜಲಪಾತೋತ್ಸವಕ್ಕೆ 50 ಲಕ್ಷ ರೂ. ಮಂಜೂರು: ಚುಂಚನಕಟ್ಟೆಯಲ್ಲಿ ಕಾವೇರಿ ಜಲಪಾತೋತ್ಸವ ಆಯೋಜಿಸಲು ಶಾಸಕ ಸಾ.ರಾ.ಮಹೇಶ್‌ ಅವರ ಮನವಿಯನ್ನು ಪರಿಗಣಿಸಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಸರ್ಕಾರದಿಂದ 50 ಲಕ್ಷ ರೂ.ಮಂಜೂರು ಮಾಡಿಸಿದ್ದಾರೆ. ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಕಾವೇರಿ ನದಿಯ ಧನುಷ್ಕೋಟಿ ಜಲಪಾತಕ್ಕೆ ಲೇಸರ್‌ ಲೈಟ್‌ ಸೇರಿದಂತೆ ಇತರ ಅಲಂಕಾರ ಮಾಡಲಿದ್ದು ಇದರ ಜತೆಗೆ ಚಲನ ಚಿತ್ರ, ಕಿರುತೆರೆ ಮತ್ತು ವಿವಿಧ ಕಲಾವಿದರು ಹಲವಾರು ಆಕರ್ಷಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌.ಜಿ.ಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next