Advertisement

Cauvery Water: ಎಚ್‌ಡಿಕೆ ಕಾವೇರಿ ಸಮಸ್ಯೆ ಬಗೆಹರಿಸಿದ್ರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ

08:17 PM Jul 17, 2024 | Team Udayavani |

ಮಂಡ್ಯ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಮುಂದಿನ ಐದು ವರ್ಷದೊಳಗೆ ಕಾವೇರಿ ಸಮಸ್ಯೆಯನ್ನು ಪರಿಹಾರ ಮಾಡಿದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸವಾಲು ಹಾಕಿದರು.

Advertisement

ಹಾಲಿ ಜಾರಿಯಲ್ಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕಾವೇರಿ ನೀರನ್ನು ಸಂಪೂರ್ಣವಾಗಿ ಕರ್ನಾಟಕಕ್ಕೆ ದೊರಕಿಸಿಕೊಟ್ಟರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಅವರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಬುಧವಾರ ನಾಗಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಂಡ್ಯ ಜಿಲ್ಲೆ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಅವರ ಕರ್ತವ್ಯ. ಅದನ್ನು ಬಿಟ್ಟು ಬೇಜವಾಬ್ದಾರಿತನದಿಂದ ಮಾತನಾಡುವ ಮೂಲಕ ಜಿಲ್ಲೆಯ ಜನರಿಗೆ ಅಗೌರವ ತಂದಿದ್ದಾರೆ. ಜೊತೆಗೆ ಗೋಡಂಬಿ, ದ್ರಾಕ್ಷಿ ತಿನ್ನಲು ಸಭೆಗೆ ಹೋಗಬೇಕಿತ್ತಾ ಎಂದು ಲಘುವಾಗಿ ಮಾತನಾಡಿರುವುದು ಸಭ್ಯತೆಯಲ್ಲ ಎಂದು ಹೇಳಿದರು.

ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿರುವ ಅವರು, ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವುದರೊಂದಿಗೆ ಕೇಂದ್ರ ಮಟ್ಟದಲ್ಲಿ ನೀರಿನ ಸಮಸ್ಯೆ ವಿಚಾರದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೆ, ಸಮಸ್ಯೆ ಬಗ್ಗೆ ಇವರಿಗೆ ಇರುವ ಆಸಕ್ತಿ ತೋರ್ಪಡಿಸುತ್ತಿತ್ತು ಎಂದು ತಿಳಿಸಿದರು.

ಉದ್ಧಟತನದ ಮಾತು ಶೋಭೆಯಲ್ಲ:
ಸಂಸದರಾಗಿ ಒಂದೇ ತಿಂಗಳಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ನಾವ್ಯಾರೂ ಒತ್ತಾಯಿಸಿರಲಿಲ್ಲ. ಸರ್ವಪಕ್ಷ ಸಭೆಗೆ ಬಂದು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂಬುದಷ್ಟೇ ನಮ್ಮ ಕಳಕಳಿ. ಅದನ್ನು ಬಿಟ್ಟು ಒಂದು ಗಂಭೀರ ವಿಷಯದ ಬಗ್ಗೆ ಉದ್ಧಟತನದ ಮಾತುಗಳನ್ನಾಡುವುದು ಶೋಭೆ ತರುವುದಿಲ್ಲ ಎಂದು ಕುಟುಕಿದರು.

Advertisement

ಸಮಾರಂಭ, ಬಾಡೂಟ ಇನ್ನೊಂದು ದಿನ ಮಾಡಬಹುದಲ್ವಾ?
ಅಭಿನಂದನಾ ಸಮಾರಂಭ, ಬಾಡೂಟ ಇನ್ನೊಂದು ದಿನ ಮಾಡುವುದಕ್ಕೂ ಅವಕಾಶವಿತ್ತು. ಸರ್ವಪಕ್ಷ ಸಭೆ ಯಾವಾಗಲೂ ನಡೆಯುವುದಿಲ್ಲ. ಬಿಜೆಪಿಯ ಹಲವು ಹಿರಿಯ ನಾಯಕರು ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಸಭೆಗೆ ಹಾಜರಾಗಿ ರಾಜಕೀಯ  ಪ್ರಬುದ್ಧತೆ ಪ್ರದರ್ಶಿಸಬೇಕಿತ್ತು.  ನನ್ನಿಂದ ಈ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ಚುನಾವಣೆಗಾಗಿ, ರಾಜಕೀಯ ಕಾರಣದಿಂದ ಆ ಮಾತನ್ನು ಹೇಳಬೇಕಾಯಿತೆಂದು ಹೇಳಿ ಬಿಡಲಿ. ಮುಂದೆ ಯಾವತ್ತೂ ಅವರನ್ನು ಈ ವಿಚಾರವಾಗಿ ಪ್ರಶ್ನಿಸುವುದೇ ಇಲ್ಲ. ನಮ್ಮ ಪಾಡಿಗೆ ನಾವು ಅಭಿವೃದ್ಧಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಚಲುವರಾಯಸ್ವಾಮಿ ಹೇಳಿದರು.
ಗೋಷ್ಠಿಯಲ್ಲಿ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜೇಶ್‌, ಮುಖಂಡ ಟಿ.ಎಲ್‌.ಕೃಷ್ಣೇ ಗೌಡ, ಮನ್‌ ಮುಲ್‌ ನಿರ್ದೇಶಕ ಕದಲೂರು ರಾಮಕೃಷ್ಣ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next