ಹುಣಸೂರು: ತಾಲೂಕಿನ ಎಲ್ಲ ಹಳ್ಳಿಗಳಿಗೂ ಶುದ್ದ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್‌ನ 3 ನೇ ಹಂತದಲ್ಲಿ 210 ಕೋಟಿ ರೂ ವೆಚ್ಚದಡಿ 211 ಕಾಮಗಾರಿಗಳಿಗೆ ನ.14 ರಿಂದ ಚಾಲನೆ ನೀಡಲಾಗುವುದೆಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ನಗರದ ಮಾರುತಿ ಪೆಟ್ರೋಲ್ ಬಂಕ್ ಬಳಿಯಲ್ಲಿ ಜಿಲ್ಲಾ ಪಂಚಾಯತ್‌ನ ಕುಡಿಯುವ ನೀರಿನ ಯೋಜನೆಯ ಸ್ಥಳಾಂತರಗೊಂಡ ಎಇಇ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು 2023 ಡಿಸೆಂಬರ್ ಅಂತ್ಯದೊಳಗೆ ಸ್ಥಳೀಯವಾಗಿ ಲಭ್ಯವಿರುವ ಜಲ ಮೂಲಗಳಿಂದ ಗ್ರಾಮೀಣ ಭಾಗದ ಜನರಿಗೆ ಶುದ್ದ ಕುಡಿಯುವ ನೀರೊದಗಿಸುವುದು ಯೋಜನೆಯ ಉದ್ದೇಶವಾಗಿದ್ದು, ಮೊದಲ ಹಂತದಲ್ಲಿ 10 ಕೋಟಿ ವೆಚ್ಚದಡಿ 28 ಹಳ್ಳಿಗಳಲ್ಲಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ಹಿಂದೆಯೇ ಯೋಜನೆಗೆ ಚಾಲನೆ ದೊರಕಬೇಕಿತ್ತಾದರೂ ನಂತರದಲ್ಲಿ ಕೋವಿಡ್ ಮತ್ತಿತರ ಸಮಸ್ಯೆಗಳಿಂದ ವಿಳಂಬವಾಗಿದ್ದು, ನ.14 ರಿಂದ ತಾವು ಸಂಸದ ಪ್ರತಾಪ ಸಿಂಹ ಹಾಗೂ ಸ್ಥಳಿಯ ಪ್ರತಿನಿಧಿಗಳೊಂಡಗೂಡಿ ಚಾಲನೆ ನೀಡಲಿದ್ದೇವೆ.
ಡಿಸೆಂಬರ್ ಅಂತ್ಯಕ್ಕೆ ಮನೆಮನೆಗೆ ನೀರು
ಪ್ರಸ್ತುತ ೪೫ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಹಂತಹಂತ ವಾಗಿ ಎಲ್ಲಾ ಕಾಮಗಾರಿಗಳು 2023ರ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯವಾಗಲಿದೆ. 4 ನೇ ಹಂತದಲ್ಲಿ ಸುಮಾರು 26 ಕೋಟಿರೂ ವೆಚ್ಚದಡಿ 60 ಜನವಸತಿ ಪ್ರದೇಶದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ನಿಗದಿಯಂತೆ ಕಾಮಗಾರಿ ಮುಕ್ತಾಯವಾಗುವ ವೇಳೆಗೆ ತಾಲೂಕಿನ 271 ಗ್ರಾಮಗಳಿಗೂ ಶುದ್ದ ನೀರು ಪೂರೈಕೆಯಾಗಲಿದೆ ಎಂದರು.
ಕನಸು ನನಸಾಗುವ ಆಶಾಭಾವನೆ
270 ಕೋಟಿರೂನ ಬಾಚಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈ ಬಾರಿಯ ಕ್ಯಾಬಿನೆಟ್‌ನಲ್ಲಿ ಆಶಾಭಾವನೆ ಇದೆ. ಯೋಜನೆಯಡಿ ಹಳೇ ಉಂಡವಾಡಿಯಿಂದ ಪೈಪ್‌ಲೈನ್ ಮೂಲಕ ಕಾವೇರಿ ಹಿನ್ನೀರನ್ನು ತಂದು ಹಾಲಿ ಇರುವ ಯೋಜನೆಗೆ ಲಿಂಕ್ ಮಾಡುವ ಬೃಹತ್ ಯೋಜನೆ ಇದಾಗಿದ್ದು, ತಾಲೂಕಿನ ಎಲ್ಲಾ 271 ಹಳ್ಳಿಗಳಿಗೂ ಕಾವೇರಿ ನೀರು ಪೂರೈಸುವ ಕನಸು ನನಸಾಗಲಿದೆ ಎಂದರು.
Related Articles
ಸುದ್ದಿಗೋಷ್ಟಿಯಲ್ಲಿ ಜಿ.ಪಂ.ಎಇಇ ನರಸಿಂಹಯ್ಯ, ಕುಡಿಯುವ ನೀರು ಯೋಜನೆಯ ಎಇಇ ಕಲೀಂ. ಮತ್ತಿತರರಿದ್ದರು.