ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಯ ಬಿಡುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಬುಧವಾರ ವಿಧಾನ ಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಜಂಟಿ ಪ್ರತಿಭಟನೆ ನಡೆಸಲಾಯಿತು.
ಕಾವೇರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಸಮರ್ಥವಾಗಿದೆ ಎಂದು ಉಭಯ ಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಮಾಜಿ ಸಚಿವರು, ಸಂಸದರು, ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಜನಹಿತವನ್ನು ಸಂಪೂರ್ಣ ಮರೆತು ಸಿದ್ದರಾಮಯ್ಯರವರು ಮತ್ತು ಡಿ.ಕೆ. ಶಿವಕುಮಾರ್‌ರವರು ತಮಿಳುನಾಡಿನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ, ಇದನ್ನು ಖಂಡಿಸಿ ಪ್ರತಿಭಟಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಒಂದಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ. ರಾಜಕೀಯ ದೊಂಬರಾಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.
ವಿರುದ್ಧ ನಾಲಗೆಯವರು… : ಜಂಟಿ ಪ್ರತಿಭಟನೆಗೆ ವಾಟಾಳ್ ವ್ಯಂಗ್ಯ
ಬಿಜೆಪಿ-ಜೆಡಿಎಸ್ ಒಂದಾಗಿ ಪ್ರತಿಭಟನೆ ನಡೆಸಿದ ಕುರಿತು ವಾಟಾಳ್ ನಾಗರಾಜ್ ಕಿಡಿ ಕಾರಿದ್ದು, ‘ಈಗ ವಿರುದ್ಧ ನಾಲಗೆಯ ಇಬ್ಬರು ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 2018ರಲ್ಲಿ ವಿಧಾನ ಸಭೆಯ ಒಳಗೆ ಮಾನ ಮಾರ್ಯಾದೆ ಇಲ್ಲದೆ ಕಚ್ಚಾಡಿಕೊಂಡಿದ್ದರು.ಬಾಯಿಗೆ ಬಂದ ಹಾಗೆ ಮಾತನಾಡಿಕೊಂಡಿದ್ದಾರೆ. ಈಗ ವಿಧಾನಸೌಧದ ಎದುರಿರುವ ಮಾಹಾತ್ಮ ಗಾಂಧೀಜಿ ಪ್ರತಿಮೆ ಮುಂದೆ ಕುಳಿತಿದ್ದಾರೆ. ಅವರಿಗೆ ಅಲ್ಲಿ ಕುಳಿತುಕೊಳ್ಳುವ ನೈತಿಕ ಹಕ್ಕಿಲ್ಲ. ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿಅವರು ರಾಜಕೀಯ ಮಾಡುವುದು ಬೇಡ ಎಂದು ಕಿಡಿ ಕಾರಿದರು.