Advertisement

Karnataka: ಮತ್ತೆ ಭುಗಿಲೆದ್ದ ಕಾವೇರಿ ಗದ್ದಲ

11:31 PM Aug 16, 2023 | Team Udayavani |

ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಮಂಡ್ಯ, ಮೈಸೂರಿನಲ್ಲಿ ಈ ಸಂಬಂಧ ರೈತರಿಂದ ರಸ್ತೆ ತಡೆ, ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಿಗೇ, ರಾಜ್ಯ ಸರಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತತ್‌ಕ್ಷಣ ನಿಲ್ಲಿಸಬೇಕು ಹಾಗೂ ಸುಪ್ರೀಂಕೋರ್ಟ್‌ಗೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ನಡುವೆ “ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದೆ. ನಮ್ಮ ರೈತರೂ ಕೋರ್ಟ್‌ಗೆ ಅರ್ಜಿ ಹಾಕಲಿ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮತ್ತೆ ಕಾವೇರಿ ಗದ್ದಲ ಶುರುವಾದಂತಿದೆ.

Advertisement

ತಮಿಳುನಾಡಿಗೆ ನೀರು ಬಿಡಬೇಡಿ: ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತತ್‌ಕ್ಷಣ ನಿಲ್ಲಿಸಿ, ಸುಪ್ರೀಂಕೋರ್ಟ್‌ಗೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿ¨ªಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ನೀರು ಬಳಕೆ ಮಾಡಿದೆ. ನಾಲ್ಕು ಪಟ್ಟು ಕುರುವೈ ಬೆಳೆ ಕ್ಷೇತ್ರ ವಿಸ್ತರಣೆ ಮಾಡಿದೆ. ಕರ್ನಾಟಕ ಸರಕಾರ ಇದನ್ನು ಪ್ರತಿಭಟಿಸದೆ ಮತ್ತು ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ ಕೂಡಲೇ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ಅತ್ತ ಸಿಎಂ ಹೇಳಿದರೆ, ಇತ್ತ ಡಿಸಿಎಂ ಶಿವಕುಮಾರ್‌ ನೇತೃತ್ವದ ನೀರಾವರಿ ಇಲಾಖೆಯು ತಮಿಳುನಾಡಿಗೆ ನೀರು ಬಿಡುತ್ತಿದೆ. ರಾಜ್ಯದಲ್ಲಿ ಕಾವೇರಿ ನೀರು ನಿರ್ವಹಣೆಯಲ್ಲಿ ಒಮ್ಮತ ಇಲ್ಲ ಹಾಗೂ ನಮ್ಮ ರಾಜ್ಯದ ನೀರಿನ ಪಾಲನ್ನು ರಕ್ಷಣೆ ಮಾಡುವಂತ ಛಲವೂ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಮದ್ದೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ರೈತ ಸಂಘಟನೆ ಕಾರ್ಯಕರ್ತರು ಬುಧವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾವಣೆಗೊಂಡ ಸಂಘಟನೆಯ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿದ ಪ್ರತಿಭಟನಕಾರರು ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಸರಕಾರ ಏಕಾಏಕಿ ತಮಿಳುನಾಡಿಗೆ ನೀರು ಹರಿಸಿ ಜಿಲ್ಲೆಯ ರೈತರನ್ನು ಕಡೆಗಣಿಸಿದೆ. ಈಗಾಗಲೇ ಜಮೀನುಗಳಲ್ಲಿ ಭತ್ತದ ನಾಟಿ ಕಾರ್ಯ ಕೈಗೊಳ್ಳಲು ಅಗತ್ಯ ಸಿದ್ಧತೆ ಕೈಗೊಂಡಿರುವ ರೈತರು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು.

ರೈತರೂ ಕೋರ್ಟ್‌ಗೆ ಹೋಗಲಿ: ಡಿಕೆಶಿ
ಬೆಂಗಳೂರು: ತಮಿಳುನಾಡಿಗೆ ನೀರು ಬಿಡಬಾರದೆಂದು ರೈತರು ಪ್ರತಿಭಟಿಸುತ್ತಿದ್ದಾರೆ. ಆದರೆ, ಕೋರ್ಟ್‌ ಕೇಳಬೇಕಲ್ಲ? ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದೆ. ನಮ್ಮ ರೈತರೂ ಕೋರ್ಟ್‌ಗೆ ಅರ್ಜಿ ಹಾಕಲಿ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 30-40 ವರ್ಷಗಳಲ್ಲಿ ಇಷ್ಟು ಮಳೆ ಕೊರತೆ ಆಗಿರಲಿಲ್ಲ. ನೀರು ಯಾರ ನಿಯಂತ್ರಣದಲ್ಲಿ ಇದೆ, ಕಾನೂನು ಏನು ಹೇಳುತ್ತದೆ ಎಂಬುದನ್ನು ನಾನೀಗ ಚರ್ಚಿಸುವುದಿಲ್ಲ. ಇದೆಲ್ಲ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೇ ಎಂದು ಮರುಪ್ರಶ್ನೆ ಹಾಕಿದರು.

ಯಾಕೆ ನೀರು ಬಿಟ್ಟಿರಿ ಎಂದರೆ ನಮ್ಮಲ್ಲಿ ಅಣೆಕಟ್ಟಿನ ಬೀಗದ ಕೀ ಇದೆಯೇ? ಕೀಲಿ ಏನಿದ್ದರೂ ಬೊಮ್ಮಾಯಿ ಮತ್ತು ಕೇಂದ್ರ ಸರಕಾರದ ಕೈಯಲ್ಲಿದೆ. ಸರಕಾರ ನಡೆಸುವವರು ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ. ಕಾನೂನು ಸಲಹೆಗಾರರ ಮಾತನ್ನೂ ಕೇಳಬೇಕಾಗುತ್ತದೆ ಎಂದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ಮಳೆ ಕೊರತೆಯಿಂದ ಜಲಾಶಯಗಳಲ್ಲಿ ಅಗತ್ಯ ನೀರಿಲ್ಲದಂತಾಗಿದೆ. ಆದಕಾರಣ ಕರ್ನಾಟಕದ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಎರಡು ರಾಜ್ಯಗಳು ಇಂತಹ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಸಂಕಟ ಸೂತ್ರ ಪಾಲಿಸಬೇಕಾಗಿದೆ. ಉತ್ತಮ ಮಳೆಯಾದರೆ ಮುಂದಿನ ದಿನಗಳಲ್ಲಿ ಎಲ್ಲವೂ ಸುಖಾಂತ್ಯ ಕಾಣಲಿದೆ.
-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ

ರೈತರ ಹಿತ ಬಲಿ ಕೊಟ್ಟು ನೀರು ಹರಿಸುವುದೇನಿದೆ?

ಬೆಂಗಳೂರು: ನಮ್ಮ ನಾಡಿನ ರೈತರ ಹಿತವನ್ನು ಬಲಿ ಕೊಟ್ಟು ತಮಿಳುನಾಡಿಗೆ ನೀರು ಬಿಡುವುದು ಸರಿಯಲ್ಲ. ಕೂಡಲೇ ಕಾವೇರಿ ಅಚ್ಚುಕಟ್ಟು ಭಾಗದ ನಾಲೆಗಳಿಗೆ ಬೆಳೆ ಬೆಳೆಯಲು ನೀರು ಹರಿಸಬೇಕು. ಸರಕಾರ ನಾಟಕೀಯವಾಗಿ ವರ್ತಿಸದೆ ರಾಜ್ಯದ ರೈತರ ಹಿತ ಕಾಪಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಳೆ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಕಾವೇರಿ ಪ್ರಾಧಿಕಾರಕ್ಕೆ ಮನವಿ ಮಾಡಿ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಬೇಕು. ಮುಖ್ಯಮಂತ್ರಿಗಳು ಒಂದು ರೀತಿ ಹೇಳಿಕೆ ಕೊಡುವುದು, ನೀರಾವರಿ ಸಚಿವರು ಮತ್ತೂಂದು ರೀತಿ ನಡೆದುಕೊಳ್ಳುವುದು ನಾಟಕೀಯ ವರ್ತನೆ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಿ ಎಂದಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ಮೇಕೆದಾಟು ನಿರ್ಮಾಣದ ಆವಶ್ಯಕತೆ ಬಗ್ಗೆ ಹೇಳಬೇಕು. ಅವರ ಮನವೊಲಿಸಿ ಸಮುದ್ರಕ್ಕೆ ಹೆಚ್ಚುವರಿಯಾಗಿ ಹರಿಯುವ ನೀರು ಉಳಿಸುವ ಬುದ್ಧಿವಂತಿಕೆಯನ್ನು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್‌ ತೋರಿಸಬೇಕು ಎಂದು ಆಗ್ರಹಿಸಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next