Advertisement

Water issue; ತಮಿಳುನಾಡಿಗೆ 8,000 ಕ್ಯೂಸೆಕ್ ಕಾವೇರಿ ನೀರು ಬಿಡುತ್ತೇವೆ: ಸಿದ್ದರಾಮಯ್ಯ

08:07 PM Jul 14, 2024 | Team Udayavani |

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ ಈ ತಿಂಗಳಾಂತ್ಯದವರೆಗೆ ಕಾವೇರಿ ನದಿಯಿಂದ ತಮಿಳುನಾಡಿಗೆ ಒಂದು ಟಿಎಂಸಿ ಬದಲಿಗೆ 8 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.

Advertisement

ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಕೇವಲ ಶೇ.63 ರಷ್ಟು ನೀರಿದ್ದು, ಈ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಜುಲೈ 11 ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 3ನೇ ಸಭೆ ನಡೆದು, ಜುಲೈ 12ರಂದು ಈ ತಿಂಗಳ ಕೊನೆಯವರೆಗೆ ಸುಮಾರು 20 ದಿನ ಪ್ರತೀ ದಿನ 1 ಟಿಎಂಸಿ ಯಂತೆ 20 ಟಿಎಂಸಿ ನೀರು ಬಿಡಲು ಆದೇಶಿಸಿದ್ದಾರೆ. ಸಾಮಾನ್ಯ ವರ್ಷದಲ್ಲಿ ಜೂನ್ ತಿಂಗಳಲ್ಲಿ 9.4 ಟಿಎಂಸಿ, ಜುಲೈ ನಲ್ಲಿ 31.24 ಟಿಎಂಸಿ ನೀರು ಬಿಡಬೇಕಾಗಿದೆ. ಅಂದರೆ ಒಟ್ಟು 40.43 ಟಿಎಂಸಿ ಬಿಡಬೇಕಾಗಿದೆ. ಇಲ್ಲಿಯವರೆಗೂ 5 ಟಿಎಂಸಿ ಗೂ ಹೆಚ್ಚು ನೀರು ಬಿಡಲು ಸಾಧ್ಯವಾಗಿದೆ. ಕಾವೇರಿ ತೀರದ ಸಚಿವರು, ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜುಲೈ 12 ರಂದು ಸಭೆ ನಡೆಸಿ ನೀರು ಬಿಡದೇ ಇರಲು ಮತ್ತು ಸರ್ವಪಕ್ಷ ಸಭೆ ಕರೆಯಲು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೆವು. ಈ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷ ಸಭೆ ನಡೆಸಲಾಯಿತು. ಬಿಜೆಪಿ, ಜೆಡಿಎಸ್, ರೈತ ಸಂಘದವರು, ಕಾನೂನು ತಂಡದ ಮುಖ್ಯಸ್ಥರಾದ ಮೋಹನ್ ಕಾತರಕಿ ಅವರು ಸೇರಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಕಾವೇರಿ ತೀರದ ಜಲಾಶಯಗಳಲ್ಲಿ 63% ಮಾತ್ರ ಭರ್ತಿ ನೀರು ಆಗಿದೆ ಎಂದು ತಿಳಿಸಿದರು.

ಕಬಿನಿ ಜಲಾಶಯ ಭರ್ತಿಯಾಗಿದ್ದು, ಕಳೆದ ಎರಡು ದಿನ 20 ಸಾವಿರ, 19 ಸಾವಿರ ಹಾಗೂ ಇಂದು 13 ಸಾವಿರ ಕ್ಯೂಸೆಕ್ಸ್ ನೀರು ಹರಿದು ಹೋಗಿದೆ. ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರು ಮಾತ್ರ ಹರಿದುಹೋಗಿದೆ.ವಕೀಲರ ತಂಡದ ಸಲಹೆ ಪ್ರಕಾರ ಹೆಚ್ಚು ಮಳೆ ಬಿದ್ದರೆ ಮಾತ್ರ ಮಳೆ ಪ್ರಮಾಣಕ್ಕೆ ತಕ್ಕಂತೆ, ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದ ಪ್ರಕಾರ ಪೂರ್ತಿ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕಾಗುತ್ತದೆ ಇದರ ಜತೆಗೆ ಮೇಲ್ಮನವಿ ಹಾಕುತ್ತೇವೆ. ನಾವು ಮೊಂಡಾಟ ಮಾಡುತ್ತಿದ್ದೇವೆ ಎಂದು ಕಾವೇರಿ ನೀರು ನಿರ್ವಹಣಾ ಸಮಿತಿಗೆ ಅನ್ನಿಸಬಾರದು ಎನ್ನುವ ಸಲಹೆ ಬಂದಿದೆ’ ಎಂದು ತಿಳಿಸಿದರು.

Advertisement

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ ,ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ , ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ, ರೈತ ಮುಖಂಡರು, ಕಾನೂನು ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next