ತೀರ್ಥಹಳ್ಳಿ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಹಿನ್ನೆಲೆ ತೀರ್ಥಹಳ್ಳಿ ಘಟಕದ ಕರವೇ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಕರವೇ ಕಾರ್ಯಕರ್ತರು ತಾಲೂಕು ಕಚೇರಿಯ ಎದುರಿನ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಘಟಕದ ಕರವೇ ಅಧ್ಯಕ್ಷ ಯಡೂರು ಸುರೇಂದ್ರ ಮಾತನಾಡಿ, ಕಾವೇರಿ ನೀರನ್ನು ರಾತ್ರಿ ಹಗಲು ಎನ್ನದೇ ಬಿಟ್ಟಿದ್ದಾರೆ. ರಾಜ್ಯ ಸರ್ಕಾರದವರು ಮಲಗಿದ್ದರೋ ಏನೋ ಗೊತ್ತಿಲ್ಲ, ನಮ್ಮ ರೈತರಿಗೆ, ಬೆಂಗಳೂರಿನ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಆಗಿದೆ. ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ವೆಂಕಟೇಶ್ ಹೆಗಡೆ, ಇಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಹೊಂದಿದೆ. ತಾಲೂಕು ಕಚೇರಿ ಮುತ್ತಿಗೆ ಹಾಕುತ್ತೇವೆ ಎಂದು ಮೊದಲೇ ತಿಳಿಸಿದ್ದರು ಕೂಡ ಯಾರು ಕೂಡ ಇರಲಿಲ್ಲ. ರಾಜ್ಯದ ಹಾಗೂ ಕೇಂದ್ರದ ಗುಪ್ತಚರ ಇಲಾಖೆ ಕೂಡ ಸಂಪೂರ್ಣ ವೈಫಲ್ಯ ಹೊಂದಿದೆ. ಕರ್ನಾಟಕದ ಪರಿಸ್ಥಿತಿಯನ್ನು ಗುಪ್ತಚರ ಇಲಾಖೆ ಮಾಹಿತಿ ನೀಡಬೇಕಿತ್ತು. ಈ ಮೊದಲು ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಬಂಗಾರಪ್ಪನವರು ನೀರನ್ನು ಬಿಟ್ಟಿರಲಿಲ್ಲ. ಈಗಲೂ ಮುಖ್ಯಮಂತ್ರಿಗಳು ಅದೇ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಜ್ಯೋತಿ ದೀಲಿಪ್ ಮಾತನಾಡಿ, ಮಳೆ ನೀರಿಗಾಗಿ ಕಾಯುವ ಪರಿಸ್ಥಿತಿ ನಮ್ಮಲ್ಲಿದೆ. ಆದರೆ ಇರುವ ನೀರನ್ನು ಕೂಡ ಮತ್ತೊಬ್ಬರಿಗೆ ಕೊಡುವುದು ಸರಿಯಲ್ಲ ಎಂದರು.