Advertisement
ಅರ್ಜಿಯನ್ನು ತ್ವರಿತ ವಿಚಾರಣೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರದ ಪರ ವಕೀಲ ವಾಸಿಂ ಖಾದ್ರಿ ಕೇಳಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ತಮಿಳುನಾಡು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯ ದಿನವೇ(ಏ.9) ಈ ಅರ್ಜಿಯನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಕಾವೇರಿ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿರುವ ಸ್ಕೀಮ್ ಎಂಬ ಪದದ ಬಗ್ಗೆ ಕೇಂದ್ರ ಸರ್ಕಾರ ಅರ್ಜಿಯಲ್ಲಿ ಸ್ಪಷ್ಟನೆ ಕೇಳಿತ್ತು. ಜತೆಗೆ, ಕರ್ನಾಟಕದಲ್ಲಿ ಚುನಾವಣೆಯಿರುವ ಹಿನ್ನೆಲೆಯಲ್ಲಿ ಸುಪ್ರೀಂ ಆದೇಶ ಪಾಲನೆಗೆ 3 ತಿಂಗಳ ಕಾಲಾವಕಾಶವನ್ನೂ ಕೋರಿತ್ತು.
ಉಪವಾಸ ಸತ್ಯಾಗ್ರಹ ನಡೆಯುತ್ತಿರುವಾಗ ಅಲ್ಲಿ ಬಿರಿಯಾನಿ, ಟೊಮ್ಯಾಟೋ ರೈಸ್‌ಗೇನು ಕೆಲಸ? ಖಂಡಿತಾ ಕೆಲಸ ಇದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ವೆಲ್ಲೂರ್‌ನಲ್ಲಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಸಿಎಂ ಪಳನಿಸ್ವಾಮಿ ನೇತೃತ್ವದಲ್ಲಿ ಒಂದು ದಿನದ ನಿರಶನ ಕೈಗೊಂಡಿದ್ದಾಗ, ಎಲ್ಲರಿಗೂ ಮಧ್ಯಾಹ್ನದ ‘ಭೋಜನ ವಿರಾಮ’ ನೀಡಲಾಗಿದೆ. ಸತ್ಯಾಗ್ರಹಿಗಳು ಬಿಸಿಬಿಸಿ ಬಿರಿಯಾನಿ, ಟೊಮ್ಯಾಟೋ ಬಾತ್ ಸವಿದಿದ್ದಾರೆ. ಹೆಸರು ಉಪವಾಸ ಸತ್ಯಾಗ್ರಹ. ತೆರೆ ಮರೆಯಲ್ಲಿ ಭರ್ಜರಿ ಭೋಜನ. ಹೀಗೆ, ಉಪವಾಸ ಕೂತವರು ಲೆಕ್ಕಹಾಕಿ ತಿಂದಿದ್ದನ್ನು ಯಾರೋ ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. ಜನರ ಕಣ್ಣಿಗೆ ಮಣ್ಣೆರೆಚುವ ನಿಜಬಣ್ಣವೂ ಬಯಲಾಗಿದೆ.