Advertisement

ಕಾವೇರಿ ಕಾಣದೆ ಬಾಡಿವೆ‌ ಹೂವುಗಳು…

12:17 PM Apr 24, 2017 | Harsha Rao |

ಝಂಜರವಾಡ (ಬೆಳಗಾವಿ): ಇಲ್ಲಿಗೆ ಬಂದವರೆಲ್ಲರ ಕಣ್ಣಾಲಿಗಳು ತುಂಬಿಕೊಳ್ಳುತ್ತಿವೆ. ಕೊಳವೆ ಬಾವಿಗೆ ಬಿದ್ದಿರುವ ಕಂದಮ್ಮ ಕಾವೇರಿ ಮಾದರ ಮನೆ ಮುಂದೆ ಆಕೆಯೇ ಬೆಳೆಸಿದ ಹೂಗಳು ತನ್ನ ಸಾಕಿದವಳಿಲ್ಲದೆ ಬಾಡಿ ಮುದುಡಿವೆ. ಮತ್ತೂಂದೆಡೆ ಕೊಳವೆ ಬಾವಿ ಮಾಲೀಕನಿಲ್ಲದೆ ಆತನ ಗುಡಿಸಲಿನ ಮುಂದೆ ಕಟ್ಟಿರುವ ಗೋವುಗಳು ಬಿಸಿಲಿನ ಬೇಗೆ
ತಾಳದೇ ಮೇವು, ನೀರಿಗೆ ಕಣ್ಣೀರು ಹಾಕುತ್ತಾ ಗೋಳಿಡುತ್ತಿವೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಪುನರ್ವಸತಿ ಕೇಂದ್ರದ ನಿವಾಸಿ ಅಜಿತ ಮಾದರ ಅವರ ಎರಡನೇ ಮಗಳು ಕಾವೇರಿ. ಪುನರ್ವಸತಿ ಕೇಂದ್ರದಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಅವಳು ಏ.22ರಂದು ಸಂಜೆ ಕೊಳವೆ ಬಾವಿಗೆ ಬಿದ್ದಿರುವ ಕಾರಣ ಆಕೆ ಮನೆ ಮುಂದಿರುವ
ಹೂಗಳು ಬಾಡಿ ಮುದುಡಿ ಕುಳಿತಿವೆ.

Advertisement

ನಿತ್ಯವೂ ಮನೆಯ ಮುಂದಿರುವ ಈ ಹೂ-ಗಿಡಗಳಿಗೆ ಕಾವೇರಿ ನೀರು ಹಾಕುತ್ತಿದ್ದಳು. ಬೆಳಗ್ಗೆ ಈ ಹೂಗಳನ್ನೇ ಕೊಯ್ದು ಮನೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಳು. ಆದರೆ ಆಕೆ ಬೆಳೆಸಿದ ಹೂಗಳು ತನ್ನನ್ನು ಬೆಳೆಸಿದ ಬಾಲೆ ಇಲ್ಲದೇ ಬಾಡಿರುವುದನ್ನು ತೋರಿಸಿ ಕಾವೇರಿಯ ಅಕ್ಕ ಅನ್ನಪೂರ್ಣಾ ಹಾಗೂ ತಮ್ಮ ಪವನ ಕಣ್ಣೀರು ಹಾಕುತ್ತಾ ತೋರಿಸುತ್ತಿದ್ದಾರೆ.

ಕಾಲು ಜಾರಿ ಬಿಡಿಬಿಟ್ಲು: ಕಾವೇರಿಯ ಕೊಳವೆ ಬಾವಿಗೆ ಬಿದ್ದ ದುರಂತದ ಅರಿವಿಲ್ಲದೇ ಇದ್ದರೂ, ಘಟನೆ ಸಂದರ್ಭದಲ್ಲಿ ಕಾವೇರಿ 3 ವರ್ಷದ ಆಕೆಯ ತಮ್ಮ ಪವನ್‌ ಜೊತೆಗೇ ಇದ್ದ. “ನಾನು ನನ್ನಕ್ಕ ಕಾವೇರಿ ಅವ್ವನ ಜೋಡಿ ಹೊಲಕ್ಕ ಹೋಗಿದ್ವಿ. ಸಂಜೀನಾಗ ಮನಿಗೆ ಬರಾಕತ್ತಿದ್ವಿ. ಕಾಲ ಜಾರಿ ಬೋರವೆಲ್‌ನ್ಯಾಗ ಬಿದ್ದಬಿಟುÛ. ಆಕಿ ಬಿದ್ದಾಳಂತ ಅವ್ವಗ ಒದರ ಹೇಳಿದೆ, ಅವ್ವ ಹಗ್ಗ ಕೊಟ್ಟಾಗ ಹಿಡಕಂಡ ಮ್ಯಾಲೆ ಬಾ ಅಂದೆ, ಪವ್ಯಾ ಪವ್ಯಾ ಅಂತ ತನ್ನನ್ನು ಕೂಗುತ್ತಿದ್ದಳು’ ಎಂದು ತೊದಲು ಮಾತಿನಿಂದ ಘಟನೆಯನ್ನು ಅಮಾಯಕವಾಗಿ ವಿವರಿಸುತ್ತಿದ್ದಾನೆ. ತಂಗಿ ಕೊಳವೆ ಬಾವಿಗೆ ಬಿದ್ದು ದುರಂತಕ್ಕೆ ಸಿಕ್ಕಿರುವ ಕುರಿತು ಕಾವೇರಿ ಸಹೋದರಿ ಅನ್ನಪೂರ್ಣಾಗೆ ಪೂರ್ಣ ಅರಿವಿದ್ದು, ಆಕೆ ಬೆಳೆಸಿದ ಮನೆ ಮುಂದಿನ
ಕೈತೋಟದಲ್ಲಿ ಕುಳಿತು ಅಳುತ್ತಿದ್ದಾಳೆ.

ಪ್ರಜ್ಞಾಹೀನ ಸ್ಥಿತಿಗೆ ತಾಯಿ: ಘಟನೆ ಬಳಿಕ ಹಗ್ಗದ ಸಹಾಯದಿಂದ ಮಗಳನ್ನು ಮೇಲೆತ್ತಲು ಪ್ರಯತ್ನ ನಡೆಸಿದ್ದ ಕಾವೇರಿ
ತಾಯಿ ಸವಿತಾ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಆಕೆಯನ್ನು ಘಟನಾ ಸ್ಥಳದಲ್ಲಿರುವ ಆಂಬ್ಯುಲೆನ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗಳು ದುರಂತಕ್ಕೆ ಸಿಕ್ಕಿರುವ ಕಾರಣ ಹೇಗಾದರೂ ಆಗಲಿ ಸುರಕ್ಷಿತವಾಗಿ ಮೇಲೆ ಬರಲಿ ಎಂದು ಕಾವೇರಿಯ ತಂದೆ ಅಜಿತ ಮಾದರ ಘಟನಾ ಸ್ಥಳದಲ್ಲೇ ದೇವರಿಗೆ ಕೈ ಮುಗಿದು ಕುಳಿತಿದ್ದಾನೆ.

ಝಂಜರವಾಡ ಗ್ರಾಮದವನಾದರೂ ಗೇಣು ಜಮೀನಿಲ್ಲದ ಅಜಿತ್‌ ಮಾದರ, ಕಳೆದ ಕೆಲವು ವರ್ಷಗಳಿಂದ ಪುನರ್ವಸತಿ
ಕೇಂದ್ರದಲ್ಲಿ ಆಶ್ರಯ ಮನೆ ಕಟ್ಟಿಕೊಂಡು ಮೂರು ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ. ಆದರೆ, ವಿಧಿ ಲಿಖೀತವೇ ಬೇರೆ. ತನ್ನ ಎರಡನೇ ಮಗಳು ಕಾವೇರಿ ದುರಂತಕ್ಕೆ ಸಿಲುಕಿಸಿರುವ ಕುರಿತು ಆತಂಕದಿಂದ ಹೇಳಿಕೊಂಡ. ಕಾವೇರಿ ಕೊಳವೆ ಬಾವಿಗೆ ಬಿದ್ದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಜಮೀನು ಮಾಲೀಕ ಶಂಕ್ರಪ್ಪ ಅಣ್ಣಪ್ಪ ಹಿಪ್ಪರಗಿ ಇದೀಗ ತಲೆ ಮರೆಸಿಕೊಂಡು ಕಣ್ಮರೆಯಾಗಿದ್ದಾನೆ. ಪರಿಣಾಮ ಹೊಲದಲ್ಲಿ ಘಟನೆಯ ಅನತಿ ದೂರದಲ್ಲೇ ಶಂಕ್ರಪ್ಪ ಹಾಕಿಕೊಂಡಿರುವ
ಜೋಳದ ಮೇವಿನ ಗುಡಿಸಲಿನ ಮುಂದಿರುವ ಪುಟ್ಟ ಕರುಗಳನ್ನು ಹೊಂದಿರುವ ಗೋವುಗಳು ಮೇವು, ನೀರಿಲ್ಲದೇ ತನ್ನ ಒಡೆಯನಿಗಾಗಿ ಗೋಳಿಡುತ್ತಿವೆ.

Advertisement

ಗೋವುಗಳ ಆರ್ತನಾದ ನೋಡಲಾಗದೇ ಕೊಳವೆ ಬಾವಿಗೆ ಬಿದ್ದಿರುವ ಕಾವೇರಿಯನ್ನು ರಕ್ಷಿಸುವ ಕಾರ್ಯಾಚರಣೆ ವೀಕ್ಷಿಸಲು ಸ್ಥಳಕ್ಕೇ ಬಂದಿದ್ದ ಕೊಕನೂರ ಗ್ರಾಮದ ಶ್ರೀಶೈಲ ಬಡಿಗೇರ ಗುಡಿಸಲಿನ ಮುಂದಿದ್ದ ಮೇವು ಹಾಕಿ, ಬೋರ್‌ವೆಲ್‌ ಪಂಪ್‌ಸೆಟ್‌ ಮೂಲಕ ಗೋವುಗಳಿಗೆ ನೀರು ತುಂಬಿಸುವ ಮಾನವೀಯ ಕೆಲಸ ಮಾಡಿದ್ದಾರೆ.

ಕಾವೇರಿ ತಾಯಿ ಸವಿತಾ ಆಸ್ಪತ್ರೆಗೆ ದಾಖಲು
ಅಥಣಿ:
ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಮಗಳು ಕೊಳವೆ ಬಾವಿಗೆ ಬಿದ್ದ ಹಿನ್ನೆಲೆಯಲ್ಲಿ ಅನ್ನಾಹಾರ ಸೇವಿಸದೆ ನೊಂದು ತೀವ್ರ ಅಸ್ವಸ್ಥಳಾದ ತಾಯಿ ಸವಿತಾ ಮಾದರ ಅವರನ್ನು ಕೊಕಟನೂರ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next