ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯವಾಗಿದ್ದು, ನೆರೆ ರಾಜ್ಯಕ್ಕೆ 15 ದಿನಗಳ ಕಾಲ ಅನಿವಾರ್ಯವಾಗಿ 5 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕಾಗಿದೆ. ತಮಿಳುನಾಡು ಸರಕಾರ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾಡಿರುವ ಸುಪ್ರೀಂ ಕೋರ್ಟ್, ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಆದೇಶದಂತೆ ಮುಂ ದಿನ 15 ದಿನ ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶಿಸಿದೆ. ಈಗಾಗಲೇ ಮಳೆ ಇಲ್ಲದೇ ಕಂಗೆಟ್ಟಿರುವ ರಾಜ್ಯವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
ಕಾವೇರಿ ನ್ಯಾಯಮಂಡಳಿಯ ತೀರ್ಪು ಬರುವಾಗಲೇ ಸಂಕಷ್ಟ ಸೂತ್ರದ ಬಗ್ಗೆ ನಿರ್ಧಾರವಾಗಬೇಕಾಗಿತ್ತು. ಬರಗಾಲದ ವೇಳೆಯಲ್ಲಿ ಯಾವ ಸೂತ್ರ ಪಾಲನೆ ಮಾಡಬೇಕು ಎಂಬ ಬಗ್ಗೆಯೂ ಆಗಲೇ ಇತ್ಯರ್ಥವಾಗಬೇಕಾಗಿತ್ತು. ಇದುವರೆಗೆ ಸಂಕಷ್ಟ ಸೂತ್ರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಹೀಗಾಗಿಯೇ ಸುಪ್ರೀಂ ಕೋರ್ಟ್ ಮುಂದೆಯೂ ನಮಗೆ ಸಂಕಷ್ಟವಿದೆ, ನೀರು ಬಿಡಲು ಆಗುವುದಿಲ್ಲ ಎಂದು ಹೇಳದಂಥ ಪರಿಸ್ಥಿತಿ ತಂದುಕೊಂಡಿದ್ದೇವೆ.
ಇನ್ನು ಕೆಆರ್‌ಎಸ್ ಜಲಾಶಯದ ಸ್ಥಿತಿಯನ್ನೇ ಗಮನಿಸುವುದಾದರೆ, ಪ್ರಸ್ತುತ 19 ಟಿಎಂಸಿ ನೀರಿದ್ದು, 5 ಟಿಎಂಸಿಯಷ್ಟು ನೀರು ಜಲಾಶಯದ ಆಳದಲ್ಲಿನ ಬದಿಯಿಂದ ಕೂಡಿದೆ. ಈ ನೀರು ಕುಡಿಯಲು ಯೋಗ್ಯವಲ್ಲ. ಉಳಿದ 10 ಟಿಎಂಸಿ ನೀರನ್ನು ಡಿಸೆಂಬರ್‌ವರೆಗೂ ಕುಡಿಯಲು ಮಾತ್ರ ಬಳಸಬಹುದಾಗಿದೆ. ಇನ್ನು ಜಿಲ್ಲೆಯಲ್ಲಿನ ಜಮೀನುಗಳಲ್ಲಿ ಕಟಾವಿಗೆ ಬಂದಿರುವ ಬೆಳೆಗಳಿಗೆ ನೀರುಣಿಸಬೇಕು. ಜತೆಗೆ ಜಲಾಶಯದ ನೀರಾವರಿ ಪ್ರದೇಶದ ಜಮೀನುಗಳಲ್ಲಿ ಮುಂಗಾರು ಹಂಗಾಮಿನ ಬೆಳೆ ಭತ್ತದ ನಾಟಿ ಮಾಡಿದ್ದು, ಆ ಬೆಳೆಯ ನಾಟಿ ಮಾಡಿ, ಕಳೆ ಕಿತ್ತು ಗೊಬ್ಬರ ಹಾಕಿದ್ದ ರೈತರು ಇನ್ನು ಮುಂದೆ ಕಟ್ಟು ನೀರು ಸಿಗದಂತಾಗಿರುವ ಪರಿಸ್ಥಿತಿಯಲ್ಲಿ ನೀರಿಲ್ಲದೆ ಪರದಾಡುವಂತಾಗಿದೆ. ಅತ್ತ ಕಬಿನಿ ಜಲಾಶಯದಲ್ಲೂ ಇದೇ ಪರಿಸ್ಥಿತಿ ಇದೆ. ಸದ್ಯ ಇಲ್ಲಿ 14.65 ಟಿಎಂಸಿ ನೀರಿನ ಸಂಗ್ರಹಮಟ್ಟ ಹೊಂದಿದೆ. ಇದರ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿಯಲ್ಲಿ ಬಳಕೆಗೆ ಸಿಗುವುದು 11.99 ಟಿಎಂಸಿ. ಉಳಿದ 7.52 ಟಿಎಂಸಿಯಲ್ಲಿ 6 ಟಿಎಂಸಿ ಡೆಡ್ ಸ್ಟೋರೇಜ್, ಇನ್ನುಳಿದ 1.52 ಟಿಎಂಸಿ ನೀರನ್ನು ಹಿನ್ನೀರಿನಲ್ಲಿರುವ ಅಪಾರ ಪ್ರಮಾಣದ ವನ್ಯಜೀವಿ ಹಾಗೂ ಜಲಚರಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವುದರಿಂದ ಬಳಸುವಂತಿಲ್ಲ. ಈಗ ಮತ್ತೆ ಸುಪ್ರೀಂ ಆದೇಶ ಪಾಲನೆಗಾಗಿ ನೀರು ಹರಿಸಿದರೆ ಬೆಂಗಳೂರು ಮಹಾನಗರ ಸೇರಿ ಜಲಾಶಯ ಅವಲಂಬಿತ ನಗರ, ಪಟ್ಟಣ, ನೂರಾರು ಗ್ರಾಮಗಳ ಜನರಿಗೆ ನೀರಿನ ತತ್ವಾರ ಎದುರಾಗಲಿದೆ. ಈಗ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡುತ್ತಾ ಹೋದರೆ, ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವುದು ಖಂಡಿತ. ಈಗ ಇನ್ನೂ ಸೆಪ್ಟಂಬರ್ ತಿಂಗಳಾಗಿದ್ದು, ಮುಂದಿನ ಮೇ ವರೆಗೂ ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ವಿಚಿತ್ರವೆಂದರೆ ಮಳೆ ಕೊರತೆಯಿಂದಾಗಿ ಬೆಳೆಯೂ ಕೈಕೊಟ್ಟಿದೆ.
ಈ ಎಲ್ಲ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಇಡೀ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಬೇಕು. ಮಳೆ ಬರದೇ ಇದ್ದಾಗ ಏನು ಮಾಡಬೇಕು ಎಂಬ ಬಗ್ಗೆ ದಾಖಲೆಗಳ ರೂಪದಲ್ಲಿ ಬರೆದಿಡಬೇಕು. ಸಾಧ್ಯವಾದರೆ ಎರಡೂ ರಾಜ್ಯಗಳು ಕುಳಿತು ವಿಷಯವನ್ನು ಬಗೆಹರಿಸಿಕೊಳ್ಳಬೇಕು. ಕೇಂದ್ರ ಸರಕಾರವೂ ಮಧ್ಯ ಪ್ರವೇಶ ಮಾಡಿ ಕರ್ನಾಟಕಕ್ಕೆ ನ್ಯಾಯ ಸಿಗುವಂತೆ ಮಾಡಬೇಕು. ಆಗಷ್ಟೇ ಕರ್ನಾಟಕಕ್ಕೆ ಪರಿಹಾರ ಸಿಗಲು ಸಾಧ್ಯ.