Advertisement

ಬಾಯಾರಿದ ಜನರ ಕಾವೇರಿ ಕನಸು

12:05 PM Apr 17, 2018 | Team Udayavani |

ಬೆಂಗಳೂರು: ಇಲ್ಲಿ ನೀರು ಅಕ್ಷರಶಃ ಖಾಸಗೀಕರಣವಾಗಿದೆ. ಕುಡಿಯಲು ಮತ್ತು ನಿತ್ಯದ ಬಳಕೆಗೆ ಖಾಸಗಿ ನೀರು ಸರಬರಾಜು ಏಜೆನ್ಸಿಗಳೇ ಯಲಹಂಕ ವಲಯದ ಜನರಿಗೆ ಆಧಾರ!

Advertisement

ಎಂಟು ದಿನಗಳಿಗೊಮ್ಮೆ ಕೇವಲ ಎರಡು ತಾಸು ಬಿಬಿಎಂಪಿ ನೀರು ಬರುತ್ತದೆ. ಅದಕ್ಕೂ ತಿಂಗಳಿಗೊಮ್ಮೆ ನೀರು ಗಂಟಿ “ಖುಷಿಗೆ’ ಅಂತಾ ಇಂತಿಷ್ಟು ಹಣ ಕೊಡಬೇಕು. ಆದರೆ, ಒಂದೊಂದು ಕಟ್ಟಡದಲ್ಲಿ ನಾಲ್ಕಾರು ಮನೆಗಳಿರುವುದರಿಂದ ಎರಡು ದಿನಗಳಲ್ಲಿ ಆ ನೀರು ಖಾಲಿ. ಹಾಗಾಗಿ, ಟ್ಯಾಂಕರ್‌ಗಳ ಅವಲಂಬನೆ ಅನಿವಾರ್ಯ.

ಅದೇ ರೀತಿ, ಕುಡಿಯುವ ನೀರಿಗೆ “ಕಾವೇರಿ ಕನೆಕ್ಷನ್‌’ ಇದೆ. ಆದರೆ, ಅದರಲ್ಲಿ ನೀರು ಹರಿಯುವುದಿಲ್ಲ. ಆದ್ದರಿಂದ ಉಳ್ಳವರು ಮನೆಗೆ 30 ರೂ. ಕೊಟ್ಟು ಕ್ಯಾನ್‌ ನೀರು ತರಿಸಿಕೊಳ್ಳುತ್ತಾರೆ. ಬಡವರು, ಖಾಸಗಿ ಏಜೆನ್ಸಿಯೊಂದು ತೆರೆದಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 10 ರೂ. ಕೊಟ್ಟು 20 ಲೀ. ನೀರು ಪಡೆಯುತ್ತಾರೆ.

ಇದು ಯಲಹಂಕ ವಲಯದ ಮಾರುತಿನಗರದ ನೀರಿನ ಸ್ಥಿತಿ. ಸುಮಾರು ಒಂದು ಲಕ್ಷ ಜನಸಂಖ್ಯೆ ಹೊಂದಿರುವ ಈ ವಾರ್ಡ್‌ನಲ್ಲಿ ಮೂರು ಮುಖ್ಯ ರಸ್ತೆಗಳಿದ್ದು, ಅದರಲ್ಲಿ 40ಕ್ಕೂ ಅಧಿಕ ಟ್ಯಾಂಕರ್‌ಗಳಿವೆ. ಇದು ಇಲ್ಲಿನ ಟ್ಯಾಂಕರ್‌ಗಳಿಗೆ ಇರುವ ಬೇಡಿಕೆಯನ್ನು ಸೂಚಿಸುತ್ತದೆ. 350 ರೂ.ಗೆ ಒಂದು ಟ್ಯಾಂಕರ್‌ ನೀರು ಬರುತ್ತದೆ.

ಮಾರುತಿನಗರದ ಕೊನೆಯಲ್ಲಿ ದೊಡ್ಡ ಪ್ರಮಾಣದ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣಗೊಳ್ಳುತ್ತಿದೆ. ಮನೆ ಮುಂದೆ ಪೈಪ್‌ಲೈನ್‌ ಹಾದುಹೋಗಿದೆ. ಅಲ್ಲದೆ, ಮನೆ-ಮನೆಗೆ ಸಮೀಕ್ಷೆ ನಡೆಸಿ, ನಲ್ಲಿ ಸಂಪರ್ಕಕ್ಕೆ ಇಂತಿಷ್ಟು ಖರ್ಚಾಗಲಿದೆ ಎಂದೂ ಅಧಿಕಾರಿಗಳು ಹೇಳಿ ಹೋಗಿದ್ದಾರೆ. ಇದೆಲ್ಲವೂ “ಕಾವೇರಿ ಕನಸು’ ಚಿಗುರೊಡೆಯುವಂತೆ ಮಾಡಿದೆ ಎಂದು 1ನೇ ಮುಖ್ಯರಸ್ತೆ ನಿವಾಸಿ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

Advertisement

ಎಲೆಕ್ಷನ್‌ಗೆ ಜಯವಾಗಲಿ!: ಈ ಮೊದಲು 10-15 ದಿನಗಳಿಗೊಮ್ಮೆ ನೀರು ಬರುತ್ತಿತ್ತು. ಚುನಾವಣೆ ಘೋಷಣೆಯಾದ ನಂತರ ವಾರಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಆದರೆ, ಆ ನೀರು ಯಾವುದಕ್ಕೂ ಸಾಕಾಗುವುದಿಲ್ಲ. ಕೊಳವೆಬಾವಿಗಳಂತೂ ಒಂದೊಂದಾಗಿ ಬತ್ತುತ್ತಿವೆ. ಈ ಸಂದಿಗ್ಧ ಸ್ಥಿತಿಯಲ್ಲಿ ಮಳೆ ತುಸು ಬೇಗ ಬಂದಿದ್ದರಿಂದ ನಿಟ್ಟುಸಿರುವ ಬಿಡುವಂತಾಗಿದೆ ಎಂದು ಮೊದಲ ಮುಖ್ಯರಸ್ತೆ 23ನೇ ಅಡ್ಡರಸ್ತೆಯ ಮಂಜುನಾಥ್‌ ಹೇಳುತ್ತಾರೆ.

ಯಲಹಂಕ ನ್ಯೂಟೌನ್‌ನಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದರೆ, ಸಮಸ್ಯೆ ಗಂಭೀರವಾಗಿಲ್ಲ. ಆದರೆ, ಕಳೆದ ತಿಂಗಳು ಎರಡು ದಿನಗಳಿಗೊಮ್ಮೆ ಬರುತ್ತಿದ್ದ ನೀರು ಈಗ ಮೂರು ದಿನಗಳಿಗೆ ವಿಸ್ತರಣೆ ಆಗಿದೆ. ನೀರು ಬಿಡುವ ಅವಧಿ ಕೂಡ ತಗ್ಗಿದೆ.

ಬೇಸಿಗೆ ಇನ್ನೂ ಎರಡು ತಿಂಗಳು ಇರುವುದರಿಂದ ಆಗ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಡಾ.ವೆಂಕಟೇಶಯ್ಯ ಆತಂಕ ವ್ಯಕ್ತಪಡಿಸುತ್ತಾರೆ. ಅಟ್ಟೂರಿನಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ. ಆದರೆ, ಅಲ್ಪ ಸಮಯ ಮಾತ್ರ ಸರಬರಾಜು ಆಗುತ್ತಿದ್ದು, ಸಾಕಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಾರೆ. 

ಪೂರೈಕೆಯಲ್ಲೂ ತಾರತಮ್ಯ?: ಬೇಸಿಗೆ ಬಂದರೆ ಸಾಕು, ನೀರುಗಂಟಿ ರಾಷ್ಟ್ರಪತಿಗಿಂತ ಬ್ಯುಸಿ ಆಗುತ್ತಾನೆ. ಕರೆ ಸ್ವೀಕರಿಸಲು ಅವರಿಗೆ ಸಮಯವೇ ಇರುವುದಿಲ್ಲ. ವಿಚಿತ್ರವೆಂದರೆ, ಮೂಲನಿವಾಸಿಗಳಿಗೆ ನೀರಿನ ಸಮಸ್ಯೆ ಆಗುವುದೇ ಇಲ್ಲ.

ಆದರೆ, ಬೇರೆ ಕಡೆಯಿಂದ ಇಲ್ಲಿಗೆ ಬಂದವರನ್ನು ಕಡೆಗಣಿಸಲಾಗುತ್ತದೆ. ತಿಂಗಳಿಗೆ ಪ್ರತಿ ಮನೆಯಿಂದ ನೀರು ಬಿಡುವವನಿಗೆ 50-100 ರೂ. “ಖುಷಿಗಾಗಿ’ ಕೊಡಬೇಕು. ಅಂದರೆ ಮಾತ್ರ ನೀರು ಬಿಡುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಮಾರುತಿನಗರದ ನಿವಾಸಿಯೊಬ್ಬರು ಅಸಹಾಯಕತೆ ತೋಡಿಕೊಂಡರು.  

ಸಮಸ್ಯೆ ಇಲ್ಲ: “ಯಲಹಂಕ ವಲಯದಲ್ಲಿ ನೀರಿನ ಸಮಸ್ಯೆ ಇದೆ ಎಂದು ಜಲಮಂಡಳಿ ಸಿಬ್ಬಂದಿಗೆ ಯಾವುದೇ ದೂರು ನೀಡಿಲ್ಲ. ಇದರರ್ಥ ಸಮಸ್ಯೆ ಇಲ್ಲ ಎಂದಾಯಿತು. ಎರಡು-ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮಾರುತಿನಗರದಲ್ಲೂ ಶೀಘ್ರದಲ್ಲೇ ಕಾವೇರಿ ನೀರು ಪೂರೈಕೆ ಆಗಲಿದೆ’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

* ವಿಜಯಕುಮಾರ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next