Advertisement
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ಕಾನೂನು ತಜ್ಞರು, ಅಡ್ವೋಕೇಟ್ ಜನರಲ್ ಮತ್ತು ತಾಂತ್ರಿಕ ತಜ್ಞರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಪಕ್ಷಗಳ ಪ್ರಮುಖರು ಮತ್ತು ಸಂಸದರ ಸಮಯಾವಕಾಶ ನೋಡಿಕೊಂಡು ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಭೆ ಕರೆಯಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Related Articles
Advertisement
ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಹೀಗಾಗಿ ಸರ್ಕಾರವೇ ಎಲ್ಲವನ್ನೂ ತೀರ್ಮಾನಿಸದೆ ಎಲ್ಲ ಪಕ್ಷಗಳ ನಾಯಕರ ಸಹಕಾರ ಪಡೆದು ಕೆಲಸ ಮಾಡಲಿದೆ. ಆದ್ದರಿಂದ ಪ್ರತಿಪಕ್ಷಗಳ ನಾಯಕರೂ ಈ ವಿಚಾರದಲ್ಲಿ ರಾಜಕೀಯ ಟೀಕೆ ಮಾಡದೆ ಸರ್ಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾವೇರಿ ಪ್ರಾಧಿಕಾರ, ಸಮಿತಿಗೆ ಹೆಸರು ಶಿಫಾರಸು ಮಾಡಿ ಸರ್ಕಾರಕೇಂದ್ರ ಸರ್ಕಾರ ರಚಿಸಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಸದಸ್ಯರಾಗಿ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿದೆ. ಅದೇ ರೀತಿ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಲ್.ಪ್ರಸನ್ನ ಅವರ ಹೆಸರು ಶಿಫಾರಸು ಮಾಡಲಾಗಿದೆ. ರಾಜ್ಯ ತನ್ನ ಪ್ರತಿನಿಧಿಗಳ ಹೆಸರು ಸೂಚಿಸದೇ ಇದ್ದರೂ ಜೂ. 22ರಂದು ಕೇಂದ್ರ ಸರ್ಕಾರ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನೀರು ನಿಯಂತ್ರಣ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ ಮಾರನೇ ದಿನವೇ ಅಂದರೆ ಜೂ. 23ರಂದು ರಾಜ್ಯ ಸರ್ಕಾರ ಈ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆದಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರ ರಾಜ್ಯದ ವಿರೋಧದ ನಡುವೆಯೂ ಪ್ರಾಧಿಕಾರ ಮತ್ತು ಸಮಿತಿಗಳನ್ನು ರಚಿಸಿದೆ. ಆದರೆ, ರಾಜ್ಯದ ಹಿತಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಹೆಸರುಗಳನ್ನು ಶಿಫಾರಸು ಮಾಡಿದೆ. ಇದರೊಂದಿಗೆ ಪ್ರಾಧಿಕಾರ ಮತ್ತು ಸಮಿತಿಗಳ ಬಗ್ಗೆ ರಾಜ್ಯದ ಪ್ರತಿಭಟನೆಯನ್ನೂ ಮುಖ್ಯಮಂತ್ರಿಗಳು ಪತ್ರದ ಮೂಲಕ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ಹೇಳಿದರು. ಜುಲೈ 2ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ ಎಂಬ ಸೂಚನೆ ಸಿಕ್ಕಿತ್ತು. ಸಭೆಗೆ ಒಟ್ಟು 9 ಸದಸ್ಯರ ಪೈಕಿ 6 ಸದಸ್ಯರು ಹಾಜರಾಗಿದ್ದರೆ ತೀರ್ಮಾನ ಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಜು. 2ರಂದು ಸಭೆ ಕರೆದಾಗ ರಾಜ್ಯದ ಪ್ರತಿನಿಧಿಗಳಿಲ್ಲದೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ಜೂ. 23ರಂದೇ ಹೆಸರುಗಳನ್ನು ಶಿಫಾರಸು ಮಾಡಲಾಯಿತು ಎಂದು ಹೇಳಿದರು. ಮೂಲಗಳ ಪ್ರಕಾರ ಜೂ. 22ರಂದು ಕೇಂದ್ರ ಸರ್ಕಾರ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನೀರು ನಿಯಂತ್ರಣ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ ಬಗ್ಗೆ ಜೂ. 23ರಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅದೇ ದಿನ ಸಂಜೆ ಕರೆಸಿಕೊಂಡಿದ್ದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ಕೇಂದ್ರದ ಜತೆ ಸಂಘರ್ಷಕ್ಕಿಳಿಯದಂತೆ ಹೇಳಿದ್ದರಲ್ಲದೆ, ಕೂಡಲೇ ಹೆಸರು ಶಿಫಾರಸು ಮಾಡುವಂತೆ ಸಲಹೆ ಮಾಡಿದ್ದರು. ಅದರಂತೆ ಅಂದು ರಾತ್ರಿಯೇ ಇಬ್ಬರ ಹೆಸರುಗಳನ್ನು ಶಿಫಾರಸು ಮಾಡಿ ಪತ್ರ ಕಳುಹಿಸಲಾಗಿತ್ತು.