ದಾವಣಗೆರೆ: ಕೋವಿಡ್ ವೈರಸ್ ವಿಷಯ ಒಳಗೊಂಡಂತೆ ಯಾವುದೇ ವಿಚಾರಗಳನ್ನ ಸಾಮಾಜಿಕ ಜಾಲತಾಣ ದಲ್ಲಿ ಅಪ್‌ಲೋಡ್, ಶೇರ್ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಎಚ್ಚರಿಸಿದ್ದಾರೆ. ದಾವಣಗೆರೆ, ಹರಿಹರದಲ್ಲಿ ಬಟ್ಟೆ ಖರೀದಿಸಿದ್ದ ಮಹಿಳೆಯರಿಗೆ ಅಡ್ಡಪಡಿಸಿದ್ದು, ಕೆಲ ವಿಚಾರ ತಾಕೀತು ಮಾಡಿದಂತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನ ವಿಚಾರಣೆ ನಡೆಸಿ ದಾವಣಗೆರೆಯ ಕೆಟಿಜೆ ನಗರ, ಬಸವನಗರ ಹಾಗೂ ಹರಿಹರದಲ್ಲಿ ಮೂರು ಪ್ರಕರಣ ದಾಖಲಿಸಿಕೊಂಡು ಐವರನ್ನ ಬಂಧಿಸಲಾಗಿದೆ. ಸಮಾಜದಲ್ಲಿ ಶಾಂತಿ ಕದಡುವ, ಪ್ರಚೋದನೆ ನೀಡುವಂತಹ ವೀಡಿಯೋ ಅಪ್‌ಲೋಡ್ ಮಾಡುವುದು ಮಾತ್ರವಲ್ಲ ಶೇರ್ ಮಾಡುವುದು ಸಹ ಅಪರಾಧ ಆಗುತ್ತದೆ. ಹಾಗಾಗಿ ಬಹಳ ಎಚ್ಚರ ವಹಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆ, ಹರಿಹರ ಘಟನೆ ನಂತರ ಆ ಸಮಾಜದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅದ್ಧೂರಿ ಬದಲಿಗೆ ಮನೆಯಲ್ಲೇ ಸರಳವಾಗಿ ರಂಜಾನ್ ಆಚರಿಸುವ ಬಗ್ಗೆ ನೀಡಿದ್ದಂತಹ ಸಂದೇಶವನ್ನ ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡು, ಆ ರೀತಿ ವರ್ತಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ
ಪ್ರಕರಣದ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ದಾವಣಗೆರೆಯಲ್ಲಿ 20 ಜನ ಪೊಲೀಸ್ ಸಿಬ್ಬಂದಿ ಹಾಗೂ 10 ಜನ ಹೋಂ ಗಾರ್ಡ್ಸ್ ಕ್ವಾರಂಟೈನ್‌ನಲ್ಲಿದ್ದಾರೆ. ಎಲ್ಲರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.