ವಾಡಿ: ವಿಧಾನಸಭೆ ಚುನಾವಣೆಯಲ್ಲಿ 4,393 ಮತಗಳ ಅಂತರದಿಂದ ಪ್ರಿಯಾಂಕ್ ಖರ್ಗೆ ಅವರ ಕೈ ಮೇಲುಗೈ ಮಾಡಿದ್ದ ಚಿತ್ತಾಪುರ ಮೀಸಲು ಮತಕ್ಷೇತ್ರದ ಮತದಾರರು, ವರ್ಷದ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ 5,365 ಮತಗಳ ಅಂತರದಿಂದ ಕಮಲ ಅರಳಿಸುವ ಮೂಲಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೈ ಕೊಟ್ಟಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ಚಿತ್ತಾಪುರದಲ್ಲಿ ಕಮಲ ಮುನ್ನಡೆದಿದ್ದಾರೂ ಹೇಗೆ ಎಂಬ ಪ್ರಶ್ನೆ ಕೈ ನಾಯಕರ ತಲೆಬಿಸಿ ಮಾಡಿದೆ.
ಪಕ್ಷದ ಹಿನ್ನೆಡೆಗೆ ಕಾರಣ ಹುಡುಕುತ್ತ ಹೊರಟಿರುವ ಕಾಂಗ್ರೆಸ್ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಜೂ. 11ರಂದು ಚಿತ್ತಾಪುರದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿದ್ದಾರೆ. ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ, ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಹೇಳುವ ಜತೆಗೆ ಹಿನ್ನೆಡೆಗೆ ಸಕಾರಣಗಳೇನು ಎಂಬುದರ ಕುರಿತು ಸುದಿಧೀರ್ಘ ಚರ್ಚೆ ಮಾಡುವ ಸಾಧ್ಯತೆಯಿದೆ.
ಅಭಿವೃದ್ಧಿ ಮೆಚ್ಚಿಕೊಳ್ಳದ ಮತದಾರ: ರಾಜ್ಯದಲ್ಲಿ ಯಾವುದೇ ಮತಕ್ಷೇತ್ರದ ಶಾಸಕ ತರದಷ್ಟು ಸಾವಿರಾರು ಕೋಟಿ ರೂ. ಅನುದಾನ ತಂದು ಅನಿರೀಕ್ಷಿತ ಮಟ್ಟದಲ್ಲಿ ಯೋಜನೆ ರೂಪಿಸಿ ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರೂ ಮತದಾರ ಮೆಚ್ಚಿಕೊಳ್ಳಲಿಲ್ಲವಲ್ಲ ಎಂಬ ಕೊರಗು ಕ್ಷೇತ್ರದ ಶಾಸಕ, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಕಾರ್ಯಕರ್ತರನ್ನು ಕಾಡುತ್ತಿರುವುದು ಬಹಿರಂಗ ಅಸಮಾಧಾನವಾಗಿದೆ. ಕ್ಷೇತ್ರದ ಪ್ರತಿಯೊಂದು ಗ್ರಾಮ ಮತ್ತು ತಾಂಡಾಗಳಿಗೆ ಅನುದಾನ ನೀಡಿ ಪ್ರಗತಿಗೆ ಮುನ್ನುಡಿ ಬರೆದರೂ ಮತದಾರ ಪ್ರಭುವಿನ ಮನಸ್ಸು ಗೆಲ್ಲಲಾಗಲಿಲ್ಲ ಎಂಬ ಕಾರ್ಯಕರ್ತರ ಅಳಲಿಗೆ ಖರ್ಗೆ ಯಾವ ಮುಲಾಮು ಹಚ್ಚುತ್ತಾರೆ ಎಂಬುದು ಕುತೂಹಲ ಮೂಡಿದೆ.
ಬ್ಲಾಕ್ ಸಮಿತಿಗಳಿಗೆ ಸರ್ಜರಿ ಭಾಗ್ಯ?: ತಾಲೂಕಿನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ವಿಸ್ತರಣೆಯಾಗದಿರುವುದೇ ಕಾರಣ ಎಂಬ ಅತೃಪ್ತಿ ಲೋಕಸಭೆ ಚುನಾವಣೆ ಸೋಲಿನ ನಂತರ ಕಾರ್ಯರ್ತರಲ್ಲಿ ಹೊಗೆಯಾಡುತ್ತಿದೆ. ಪದಾಧಿಕಾರಿಗಳ ಆಯ್ಕೆಯಿಲ್ಲದೆ ಕೇವಲ ಅಧ್ಯಕ್ಷರಿಂದ ಮಾತ್ರ ಹಲವು ವರ್ಷಗಳ ಕಾಲ ಮುಂದುವರಿಯುತ್ತಿರುವ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಹಾಗೂ ವಾಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯಾದರೂ ಸರ್ಜರಿ ಭಾಗ್ಯ ಕರುಣಿಸುವವರೇ ಎಂಬ ಚರ್ಚೆ ಗರಿಗೆದರಿದೆ.
ಎಲ್ಲ ಸಮಿತಿಗಳಿಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜವಾಬ್ದಾರಿ ಕೊಟ್ಟರೆ ಪಕ್ಷವನ್ನು ತಳಮಟ್ಟದಲ್ಲಿ ಸಂಘಟನೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಮುಖಂಡರ ಅಭಿಪ್ರಾಯವಾಗಿದೆ. ಚಿತ್ತಾಪುರ ಪುರಸಭೆ ಹಾಗೂ ವಾಡಿ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಒಮ್ಮೆಯೂ ಸದಸ್ಯರ ನಾಮನಿರ್ದೇಶನ ಮಾಡಿಲ್ಲ ಎಂಬ ಅತೃಪ್ತಿ ಕಾರ್ಯಕರ್ತರ ಮನದಲ್ಲಿ ಮಡುಗಟ್ಟಿದೆ. ಇದರ ನಡುವೆಯೂ ಬ್ಲಾಕ್ ಅಧ್ಯಕ್ಷರು, ಪಕ್ಷದ ಮುಖಂಡರು, ಕಾರ್ಯಕರ್ತರು ಶಕ್ತಿಮೀರಿ ಪಕ್ಷದ ಗೆಲುವಿಗೆ ಶ್ರಮಿಸಿದ್ದನ್ನು ಅಲ್ಲಗಳೆಯುವಂತಿಲ್ಲ. ಪಕ್ಷದಲ್ಲಿ ಮೂಡಿರುವ ಅತೃಪ್ತಿಗಳಿಗೆ ಖರ್ಗೆ ಯಾವರೀತಿ ತೇಪೆ ಹಚ್ಚಿ ಕೈ ಕೋಟೆ ಕಟ್ಟುತ್ತಾರೋ ಕಾಯ್ದು ನೋಡಬೇಕು.
•ಮಡಿವಾಳಪ್ಪ ಹೇರೂರ