Advertisement
ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ಅತೀ ಸಾಮಾನ್ಯ ಕಾರಣಗಳು ಎಂದರೆ ತಂಬಾಕು ಸೇವನೆ ಮತ್ತು ಮದ್ಯಪಾನ. ಮದ್ಯಪಾನ ಮತ್ತು ತಂಬಾಕು ಸೇವನೆಗಳು ಸಂಯೋಜಿತ ಪರಿಣಾಮ ಹೊಂದಿದ್ದು, ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಶೇ. 50ರಷ್ಟು ಹೆಚ್ಚಿಸುತ್ತವೆ. ಸಿಗರೇಟಿನಲ್ಲಿ ಬೆಂಜೊಪೈರೀನ್ ಮತ್ತು ಹೈಡ್ರೊಕಾರ್ಬನ್‌ಗಳಿದ್ದು, ಇವೆಲ್ಲವೂ ಕ್ಯಾನ್ಸರ್‌ಕಾರಕಗಳಾಗಿವೆ.
Related Articles
Advertisement
ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ವಿಷಾಂಶಮುಕ್ತ ಕೆಲಸದ ಪರಿಸರ ಹಾಗೂ ಆರೋಗ್ಯಕರ ಆಹಾರಾಭ್ಯಾಸ ಮತ್ತು ಜೀವನ ಕ್ರಮಗಳು ಧ್ವನಿಪೆಟ್ಟಿಗೆಗೆ ಹಾನಿ ಉಂಟಾಗದಂತೆ ತಡೆಯುತ್ತವೆ, ಹಾನಿ ಉಂಟಾದರೂ ಬೇಗನೆ ವಾಸಿಯಾಗುವಂತೆ ಮಾಡುತ್ತವೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್ ರೋಗಿಗಳು ಸಾಮಾನ್ಯವಾಗಿ ಒಡಕು, ದೊರಗು ಧ್ವನಿಯನ್ನು ಹೊಂದಿರುತ್ತಾರೆ. ಕ್ಯಾನ್ಸರ್‌ಗೆ ತುತ್ತಾಗುವ ವಯೋಗುಂಪಿನಲ್ಲಿರುವ, ಅಪಾಯಾಂಶಗಳ ಇತಿಹಾಸ ಹೊಂದಿರುವ, ದೊರಗು- ಒಡಕು ಧ್ವನಿಯನ್ನು ಮೂರು ವಾರಗಳಿಗಿಂತ ಹೆಚ್ಚು ಸಮಯದಿಂದ ಹೊಂದಿರುವ ವ್ಯಕ್ತಿಗಳು ಇಎನ್‌ಟಿ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರನ್ನು ಸಂಪರ್ಕಿಸಿ ಧ್ವನಿಪೆಟ್ಟಿಗೆಯ ವಿಸ್ತೃತ ತಪಾಸಣೆಗೆ ಒಳಗಾಗಬೇಕು ಎಂದು ಶಿಫಾರಸು ಮಾಡಲಾಗಿದೆ.
ಧ್ವನಿಪೆಟ್ಟಿಗೆಯ ತಪಾಸಣೆಯು ಹೊರರೋಗಿ ವಿಭಾಗದಲ್ಲಿ ನಡೆಸುವ ಪ್ರಕ್ರಿಯೆಯಾಗಿದೆ. ಇದರಲ್ಲಿ ಧ್ವನಿಪೆಟ್ಟಿಗೆಯ ವಿಸ್ತೃತ ದಾಖಲೀಕರಣ ನಡೆಸುವ ಫ್ಲೆಕ್ಸಿಬಲ್ ಫೈಬರ್ ಆಪ್ಟಿಕ್ ಅಥವಾ ರಿಜಿಡ್ ಅಥವಾ ವೀಡಿಯೋ ಲ್ಯಾರಿಂಜೊಸ್ಕೊಪಿ ನಡೆಸಲಾಗುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಸಂಶಯಾತ್ಮಕ ಬೆಳವಣಿಗೆ ಕಂಡುಬಂದರೆ ಕ್ಯಾನ್ಸರನ್ನು ಖಚಿತಪಡಿಸಿಕೊಳ್ಳಲು ಧ್ವನಿಪೆಟ್ಟಿಗೆಯ ಬಯಾಪ್ಸಿಯನ್ನು ನಡೆಸಬೇಕು.
ಎಲ್ಲ ರೋಗಿಗಳ ಕುತ್ತಿಗೆ ಮತ್ತು ಎದೆಯ ಸಿಟಿ ಸ್ಕ್ಯಾನ್ ನಡೆಸುವುದರಿಂದ ಕ್ಯಾನ್ಸರ್ ಎಷ್ಟು ಪ್ರಮಾಣದಲ್ಲಿ ಹರಡಿದೆ ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ. ತಪಾಸಣೆಯ ಸಂದರ್ಭದಲ್ಲಿ ಗಡ್ಡೆಯ ಗಾತ್ರ, ಹರಡಿರುವ ಪ್ರಮಾಣವನ್ನು ಆಧರಿಸಿ ಧ್ವನಿಪೆಟ್ಟಿಗೆಯ ಹಂತಗಳನ್ನು ಒಂದರಿಂದ 5ರ ವರೆಗೆ ನಿರ್ಧರಿಸಲಾಗುತ್ತದೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಹಲವಾರು ಆಯ್ಕೆಗಳು ಲಭ್ಯವಿವೆ. ರೇಡಿಯೋಥೆರಪಿ, ಕಿಮೊಥೆರಪಿ, ಶಸ್ತ್ರಚಿಕಿತ್ಸೆ (ಕನ್ಸರ್ವೇಟಿವ್ ಮತ್ತು ಟೋಟಲ್ ಲ್ಯಾರಿಂಜೆಕ್ಟೊಮಿ-ಧ್ವನಿಪೆಟ್ಟಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು) ಮತ್ತು ಸಂಯೋಜಿತ ಚಿಕಿತ್ಸೆ ಇವುಗಳಲ್ಲಿ ಸೇರಿವೆ.
ಟೋಟಲ್ ಲ್ಯಾರಿಂಜೆಕ್ಟೊಮಿಯಲ್ಲಿ ಇಡೀ ಧ್ವನಿಪೆಟ್ಟಿಗೆಯನ್ನು ಮತ್ತು ಆಸುಪಾಸಿನ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದರಿಂದ ಇದಾದ ಬಳಿಕ ಧ್ವನಿ ಸಂಪೂರ್ಣ ನಷ್ಟವಾಗುತ್ತದೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್ ನಿರ್ವಹಣೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಟ್ರೆಂಡ್ ಕಿಮೊಥೆರಪಿ+ರೇಡಿಯೋಥೆರಪಿಯನ್ನು ಸಂಯೋಜಿತವಾಗಿ ಬಳಸುವ ಮೂಲಕ ಧ್ವನಿಪೆಟ್ಟಿಗೆಯನ್ನು ಉಳಿಸುವ ಪ್ರಯತ್ನದಲ್ಲಿದೆ. ಟೋಟಲ್ ಲ್ಯಾರಿಂಜೆಕ್ಟೊಮಿಗೆ ಒಳಗಾಗಲಿರುವ ರೋಗಿಗಳಿಗೆ ಒಂದು ಕೋರ್ಸ್ ಕಿಮೊಥೆರಪಿಯನ್ನು ಒದಗಿಸಲಾಗುತ್ತದೆ. ರೇಡಿಯೋಥೆರಪಿಗೆ ಸಂಪೂರ್ಣ ಪ್ರತಿಸ್ಪಂದನ ಹೊಂದಿರುವ ರೋಗಿಗಳಿಗೆ ಸಂಪೂರ್ಣ ರೇಡಿಯೊಥೆರಪಿ ನೀಡಲಾಗುತ್ತದೆ.
ಯಾವುದೇ ಪ್ರತಿಸ್ಪಂದನೆ ಇಲ್ಲದವರು/ ಆಂಶಿಕ ಪ್ರತಿಸ್ಪಂದನೆ ಹೊಂದಿರುವವರನ್ನು ಶಸ್ತ್ರಚಿಕಿತ್ಸೆ ಮತ್ತು ಆ ಬಳಿಕ ರೇಡಿಯೋಥೆರಪಿ ನೀಡಲಾಗುತ್ತದೆ. ಚಿಕಿತ್ಸೆಯ ಬಳಿಕ ಧ್ವನಿನಷ್ಟವು ರೋಗಿಯ ಕಾರ್ಯಚಟುವಟಿಕೆಗಳ ಮೇಲೆ, ಮಾನಸಿಕ ಆರೋಗ್ಯದ ಮೇಲೆ ಮತ್ತು ಜೀವನ ಗುಣಮಟ್ಟದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ.
ಈ ಅಂಶಗಳು ಕ್ಯಾನ್ಸರ್ ಬಳಿಕ ಜೀವಿತಾರೈಕೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಧ್ವನಿಪೆಟ್ಟಿಗೆಯ ಕ್ಯಾನ್ಸರ್ ರೋಗಿಗಳು ಸಾಮಾನ್ಯವಾಗಿ ಸಂಕೀರ್ಣ ಡಿಸ್‌ಫೋನಿಯಾ ಸಮಸ್ಯೆಗಳೊಂದಿಗೆ ವೈದ್ಯರ ಬಳಿಗೆ ಆಗಮಿಸುತ್ತಾರೆ. ಉದಾಹರಣೆಗೆ, ಕಿಮೋರೇಡಿಯೇಶನ್ ಬಳಿಕ ಧ್ವನಿಯು ತೀಕ್ಷ್ಣ, ದೊರಗು ಮತ್ತು ಉಸಿರಾಟ ಸಶಬ್ದವಾಗಿರುತ್ತದೆಯಲ್ಲದೆ ಬದಲಾದ ಸ್ಥಾಯಿಯಲ್ಲಿರುತ್ತದೆ; ಇದು ದೀರ್ಘಕಾಲದ ವರೆಗೆ ಉಳಿಯಬಹುದು. ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಚಿಕಿತ್ಸೆಯ ಬಳಿಕ ರೋಗಿಗಳು ಕಳಪೆ ಧ್ವನಿಮಟ್ಟ, ಗಡಸು ಅಥವಾ ಕೀರಲು ಸ್ವರ, ಗಟ್ಟಿಯಾಗಿ ಧ್ವನಿ ಹೊರಡಿಸಲು ಆಗದೆ ಇರುವುದು, ಧ್ವನಿಯಲ್ಲಿ ದಣಿವು ಮೊದಲಾದ ತೊಂದರೆಗಳನ್ನು ಹೊಂದಬಹುದು. ಶೇ. 41ರಷ್ಟು ರೋಗಿಗಳು ಚಿಕಿತ್ಸೆಗೆ ಮುನ್ನ ಖನ್ನತೆ ಮತ್ತು ಆತಂಕಗಳನ್ನು ಅನುಭವಿಸುತ್ತಾರೆ ಹಾಗೂ ಚಿಕಿತ್ಸೆಯ ಬಳಿಕ ಜೀವನ ಗುಣಮಟ್ಟ ಕುಗ್ಗುವುದರಿಂದ ಈ ತೊಂದರೆಗಳಿಂದ ಬಳಲುವುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ.
ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಧ್ವನಿ ಪುನರ್ವಸತಿಯಿಂದ ಧ್ವನಿ, ರೋಗಿ ಸಂವಹನಗಳು ಗಮನಾರ್ಹವಾಗಿ ಉತ್ತಮಗೊಳ್ಳುತ್ತವೆ ಹಾಗೂ ರೋಗಿಗಳ ಜೀವನ ಗುಣಮಟ್ಟ ಮತ್ತು ಸುಧಾರಿಸುತ್ತದೆ ಎಂಬುದನ್ನು ಅಧ್ಯಯನಗಳು ಹೇಳಿವೆ.
-ಡಾ| ಅನುಷಾ ಶಶಿಧರ ಶೆಟ್ಟಿ ಅಸೋಸಿಯೇಟ್ ಪ್ರೊಫೆಸರ್, ಇಎನ್‌ಟಿ ಸರ್ಜನ್, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ-ಕಾರ್ಕಳ