ವಾಷಿಂಗ್ಟನ್: ಇಬ್ಬರು ಯುವಕರು ಪಾಡ್ ಕಾಸ್ಟ್(Podcast) ರೆಕಾರ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾಫಿ ಶಾಪ್ ಕಿಟಕಿಗೆ ಅತೀ ವೇಗವಾಗಿ ಬಂದ ಎಸ್ ಯುವಿ ಕಾರು ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ಟೆಕ್ಸಾಸ್ ನ ಹೂಸ್ಟನ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಪಡುಬಿದ್ರಿ: ಟ್ಯಾಂಕರ್ – ಸ್ಕೂಟರ್ ಅಪಘಾತ; ಇಬ್ಬರು ಸ್ಥಳದಲ್ಲೇ ಮೃತ್ಯು
ಫಾಕ್ಸ್ 26 ನ್ಯೂಸ್ ಪ್ರಕಾರ, ಟೆಕ್ಸಾಸ್ ನ ಕಾಫಿ ಶಾಪ್ ವೊಂದರಲ್ಲಿ ಅಲೆಕ್ಸೈ ರೆಯೀಸ್ ಮತ್ತು ನಾಥನ್ ರೀವ್ಸ್ ಮಾರ್ಚ್ 5ರಂದು ಪಾಡ್ ಕಾಸ್ಟ್ ರೆಕಾರ್ಡಿಂಗ್ ನಲ್ಲಿ ನಿರತರಾಗಿದ್ದರು. ಆಗ ಅತೀ ವೇಗದಲ್ಲಿ ಬಂದ ಕಪ್ಪುಬಣ್ಣದ ಚೆವ್ರೋಲೆಟ್ ಕಾರು ಈ ಇಬ್ಬರು ಕುಳಿತಿದ್ದ ಕಾಫಿ ಶಾಪ್ ನ ಕಿಟಕಿಗೆ ಬಡಿದಪ್ಪಳಿಸಿತ್ತು. ಕಿಟಕಿ ಗಾಜುಗಳೆಲ್ಲಾ ಪುಡಿ, ಪುಡಿಯಾಗಿದ್ದು, ಅದೃಷ್ಟವಶಾತ್ ಇಬ್ಬರು ಸಣ್ಣ,ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ತಿಳಿಸಿದೆ.
ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, “ಪಾಡ್ ಕಾಸ್ಟ್ ರೆಕಾರ್ಡಿಂಗ್ ಮಾಡುತ್ತಿದ್ದ ವೇಳೆ ಕೆಫೆಗೆ ನುಗ್ಗಿದ ಕಾರು” ಎಂದು ಉಲ್ಲೇಖಿಸಿದ್ದಾರೆ.
ಏಕಾಏಕಿ ಕಾರು ಕಾಫಿ ಶಾಪ್ ನ ಕಿಟಕಿಗೆ ಡಿಕ್ಕಿ ಹೊಡೆದ ಶಬ್ದ ಕೇಳಿ ಗಾಬರಿಯಾಗಿಬಿಟ್ಟಿದ್ದೇವು. ಹಿಂಬದಿ ತಿರುಗಿ ನೋಡಿದಾಗ, ಕಾರು ಹಿಂದಕ್ಕೆ ಹೋಗುತ್ತಿತ್ತು. ಸದ್ಯ ನಮಗೆ ಏನೂ ಪ್ರಾಣಾಪಾಯವಾಗಿಲ್ಲ ಎಂದು ರೆಯೀಸ್ ಮತ್ತು ರೀವ್ಸ್ ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಹಲವಾರು ಪೊಲೀಸರು, ಅಗ್ನಿಶಾಮಕ ದಳ ದೌಡಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ವಿವರವನ್ನು ನೀಡಿಲ್ಲ ಎಂದು ವರದಿ ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಟ್ವೀಟರ್ ನಲ್ಲಿ ವಿಡಿಯೋ 40 ಲಕ್ಷ ವೀವ್ಸ್ ಕಂಡಿದ್ದು, 14,000 Retweets ಮಾಡಲಾಗಿದೆ.