ಇಂಡೋನೇಷ್ಯಾ : ಇಂಡೋನೇಷ್ಯಾದ ಜಕಾರ್ತದಲ್ಲಿರುವ ಇಸ್ಲಾಮಿಕ್ ಸೆಂಟರ್‌ನ ಮಸೀದಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಪರಿಣಾಮ ಮಸೀದಿಯಲ್ಲಿನ ಬೃಹತ್ ಗುಮ್ಮಟ ಕುಸಿದು ಬಿದ್ದಿದೆ.
ಜಕಾರ್ತಾ ಇಸ್ಲಾಮಿಕ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಡಿಯೋದಲ್ಲಿ ಮಸೀದಿಯ ಗುಮ್ಮಟ ಬಿದ್ದಿರುವುದನ್ನು ತೋರಿಸಲಾಗಿದೆ. ಗಲ್ಫ್ ಟುಡೇ ವರದಿ ಪ್ರಕಾರ, ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಮಸೀದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದ್ದು ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ, ವಿಡಿಯೋದಲ್ಲಿ ಕಾಣುವಂತೆ ಬೆಂಕಿಯ ಜ್ವಾಲೆ ಇಡೀ ಕಡ್ಡಟವನ್ನು ಆವರಿಸಿದೆ ಅಲ್ಲದೆ ಪರಿಸರ ತುಂಬಾ ದಟ್ಟ ಹೊಗೆಯಿಂದ ಆವರಿಸಿತ್ತು ಎಂಬುದನ್ನು ಕಾಣಬಹುದಾಗಿದೆ. ಘಟನೆ ಸಂಭವಿಸಿದ ಕೂಡಲೇ ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದೆ.
ಮಸೀದಿಯ ದುರಸ್ತಿ ಕಾರ್ಯ ನಡೆಯುತ್ತಿದ್ದ ಪರಿಣಾಮ ಅದೃಷ್ಟವಶಾತ್ ಮಸೀದಿಯಲ್ಲಿ ಯಾರೂ ಇರಲಿಲ್ಲ ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಬೆಂಕಿ ಅವಘಡ ಸಂಭವಿಸಲು ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇದನ್ನೂ ಓದಿ : ಜೈಲಿನಿಂದ ತಪ್ಪಿಸಿಕೊಂಡಿದ್ದ ಸಿದ್ದು ಮೂಸೆವಾಲಾ ಹತ್ಯೆ ಆರೋಪಿ ಟಿನು ಕೊನೆಗೂ ಅರೆಸ್ಟ್