Advertisement

ರಾಸುಗಳ ದರ ಕಾರಿಗಿಂತಲೂ ದುಬಾರಿ

09:12 PM Jan 14, 2020 | Lakshmi GovindaRaj |

ಚನ್ನರಾಯಪಟ್ಟಣ: ಸುಗ್ಗಿಯ ನಂತರ ನಡೆಯುವ ಪ್ರಥಮ ಜಾತ್ರೆ ಎನಿಸಿದ ತಾಲೂಕಿನ ಇತಿಹಾಸ ಪ್ರಸಿದ್ಧ ಬೂಕನಬೆಟ್ಟದ ರಂಗನಾಥಸ್ವಾಮಿ ರಾಸುಗಳ ಜಾತ್ರೆ ಪ್ರಾರಂಭವಾಗಿ ಇಂದಿಗೆ ನಾಲ್ಕು ದಿನ ಕಳೆದಿದ್ದು, ರಾಸುಗಳ ದರ ಕಾರಿಗಿಂತಲೂ ದುಬಾರಿಯಾಗಿದೆ.

Advertisement

ಎರಡ್ಮೂರು ಲಕ್ಷ ರೂ. ನೀಡಿದರೆ ಕಾರುಗಳು ನಮ್ಮ ಕೈ ಸೇರುತ್ತವೆ. ಆದರೆ ಈ ಜಾತ್ರೆಯಲ್ಲಿ ಜೋಡಿ ರಾಸುಗಳು ಬೆಲೆ ದುಬಾರಿಯಾಗಿದ್ದು, 25 ಸಾವಿರ ರೂ. ನಿಂದ ಆರು ಲಕ್ಷ ರೂ. ವರೆಗೆ ಬೆಲೆಬಾಳುವ ರಾಸುಗಳನ್ನು ಜಾತ್ರೆ ಪಾಳಯದಲ್ಲಿ ಕಟ್ಟಲಾಗಿದೆ. ಅನೇಕ ಮಂದಿ ಲಕ್ಷಾಂತರ ರೂ. ಬೆಲೆ ಬಾಳುವ ರಾಸುಗಳನ್ನು ಕೊಳ್ಳುವ ಹವ್ಯಾಸ ರೂಢಿಸಿಕೊಂಡಿದ್ದು, ಅವುಗಳನ್ನು ಬೇರೆ ಜಾತ್ರೆಗಳಲ್ಲಿ ಪದರ್ಶನ ಮಾಡಲು ಮುಂದಾಗಲಿದ್ದಾರೆ.

ರಾಸುಗಳ ಖರೀದಿ ಜೋರು: ರಾಸುಗಳ ಜಾತ್ರೆ ಜ.10ರಿಂದ ಆರಂಭವಾಗಿದ್ದು, ರಾಸುಗಳನ್ನು ಖರೀದಿಸಲು ಸಾವಿರಾರು ರೈತರು ಬೂಕನ ಬೆಟ್ಟಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಇದರಿಂದ ಎಲ್ಲೆಡೆ ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಅಕ್ಕ ಪಕ್ಕದ ಜಿಲ್ಲೆಗಳಲ್ಲದೇ ಉತ್ತರ ಕರ್ನಾಟಕದ ಹುಬ್ಬಳಿ-ಧಾರವಾಡ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಹಾವೇರಿ, ಗಂಗಾವತಿ ಜಿಲ್ಲೆ ಸೇರಿದಂತೆ ಕೃಷಿ ಪ್ರಧಾನ ಜಿಲ್ಲೆಯಿಂದ ರಾಸುಗಳನ್ನು ಕೊಳ್ಳಲು ನಿತ್ಯವೂ ರೈತರು ತಾಲೂಕಿಗೆ ಆಗಮಿಸುತ್ತಿದ್ದು, ನೂರಾರು ಜೋಡಿ ರಾಸುಗಳು ಖರೀದಿ ಜೋರಾಗಿ ನಡೆಯುತ್ತಿದೆ.

ಸ್ವಲ್ಪ ದುಬಾರಿ: ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಕೃಷಿ ಬಳಕೆಯ ರಾಸುಗಳ ಬೆಲೆ ಕೊಂಚ ದುಬಾರಿಯಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಕೃಷಿ ಚಟುವಟಿಕೆ ಉತ್ತಮವಾಗಿ ನಡೆಯುತ್ತಿದೆ. ಹಾಗಾಗಿ ರಾಸುಗಳನ್ನು ಕೊಳ್ಳುವವರು ಹಾಗೂ ಮಾರಾಟ ಮಾಡುವ ರೈತರು ಉತ್ಸುಕರಾಗಿದ್ದಾರೆ. ಇದರಿಂದ ಸ್ವಲ್ಪ ಬೆಲೆ ಹೆಚ್ಚಾಗಿದೆ ಎಂದು ರೈತರು ಜಾತ್ರೆ ಆವರಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಬಿಸಿಲ ಝಳ: ಬೆಳಗ್ಗೆ 10 ಗಂಟೆಯಾದರು ಚಳಿ ಇಬ್ಬನಿ ಬೀಳುತ್ತಿರುತ್ತದೆ. ನಂತರ ಬಿಸಿಲ ಝಳ ಹೆಚ್ಚುತ್ತಿದ್ದು, ರೈತರು ಬೀಡಾರದ ನೆರಳು ಅವಲಂಬಿಸುವಂತಾಗಿದೆ. ಬಿಸಿಲ ಬೇಗೆಗೆ ಬೆಯುತ್ತಿರುವ ರೈತರು ತಂಪುಪಾನೀಯ ಮೊರೆ ಹೋಗುತ್ತಿದ್ದಾರೆ. ಜಾತ್ರೆಯಲ್ಲಿ ಎಳನೀರು, ಕಲ್ಲಂಗಡಿ, ಶರಬತ್ತು ಹಾಗೂ ಕಬ್ಬಿನ ಹಾಲಿನ ಮಾರಾಟ ಜೋರಾಗಿ ನಡೆಯುತ್ತಿದೆ. ರಾಸುಗಳಿಗೆ ನೀರಿನ ಸಮಸ್ಯೆ ಉಂಟಾಗಂತೆ ತಾಲೂಕು ಆಡಳಿತ ಮುಂಜಾಗ್ರತೆ ವಹಿಸಿದ್ದು, ಸಕಾಲಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ.

Advertisement

ಮೂರು ಸಾವಿರ ರಾಸುಗಳ ಆಗಮನ: ರಾಸುಗಳ ಜಾತ್ರೆಗೆ ಈಗಾಗಲೆ ವಿವಿಧ ಜಿಲ್ಲೆಯಿಂದ ಮೂರು ಸಾವಿರ ರಾಸುಗಳು ಆಗಮಿಸಿವೆ, ಇವುಗಳಲ್ಲಿ ಹಳ್ಳಿಕಾರ್‌ ಜೋಡೆತ್ತುಗಳಿಗೆ ಬೇಡಿಕೆ ಹೆಚ್ಚಿದೆ, ಹೆಚ್ಚಾಗಿ ಭತ್ತ ಬೆಳೆಯುವ ಜಿಲ್ಲೆಯ ರೈತರು ಇವುಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ಸಾವಿರಾರು ಜೋಡಿ ರಾಸುಗಳು ಆಗಮಿಸುವ ನಿರೀಕ್ಷೆ ಇದೆ, ರಾಸುಗಳನ್ನು ಲಾರಿ ಹಾಗೂ ಆಟೋಗಳಲ್ಲಿ ಸಾಗಣೆ ಮಾಡುತ್ತಿದ್ದು, ಇದಕ್ಕೆ ಬೇಕಿರುವ ರ್‍ಯಾಂಪ್‌ ವ್ಯವಸ್ಥೆ ಜಾತ್ರೆ ನಡೆಯುವ ಸ್ಥಳದಲ್ಲಿ ಮಾಡಲಾಗಿದೆ.

20 ಕಿ.ಮೀ. ದೂರದಿಂದ ನೀರು ಪೂರೈಕೆ: ಮುಂಜಾಗ್ರಾತಾ ಕ್ರಮವಾಗಿ ಪಟ್ಟಣ ಸಮೀಪದ ಹಾಲು ಉತ್ಪನಗಳ ಹೈಟೆಕ್‌ ನಂದಿನಿ ಘಟಕದಿಂದ ನಿತ್ಯವೂ ಸುಮಾರು 20 ಕಿ.ಮೀ. ದೂರದಿಂದ 50 ಸಾವಿರ ಲೀ. ಸಾಮರ್ಥ್ಯದ ಎರಡು ಲಾರಿಯಲ್ಲಿ ನೀರು ಸರಬರಾಜು ಮಾಡುತ್ತಿರುವುದಲ್ಲದೇ ನಾಲ್ಕು ಟ್ಯಾಂಕರ್‌ ಟ್ರಾಕ್ಟರ್‌ ಮೂಲಕವೂ ಜಾತ್ರೆಗೆ ನೀರು ನೀಡುವ ಮೂಲಕ ತಾಲೂಕು ಆಡಳಿತ ರೈತರಿಗೆ ಉತ್ತಮ ಸಹಕಾರ ನೀಡಿದೆ.

ಕೃಷಿ ಇಲಾಖೆ ಮೂಲಕ ಜಾತ್ರೆ ನಡೆಯುವ ಬೂಕನ ಬೆಟ್ಟದ ತಪ್ಪಲಿನಲ್ಲಿ ಎರಡು ಕೃಷಿ ಹೊಂಡ ನಿರ್ಮಿಸಿದ್ದು ಅದಕ್ಕೆ ಕವರ್‌ ಹಾಕಿ ನೀರು ಸಂಗ್ರಹಣೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಮೂಲಕ ನೀರು ಸಂಗ್ರಹಣಾ ಟ್ಯಾಂಕ್‌ ಮಾಡಿದ್ದು ಅಲ್ಲಿಯೂ ನೀರು ಶೇಖರಣೆ ಮಾಡಲಾಗಿದ್ದು ಜನ ಹಾಗೂ ಜಾನುವಾರುಗಳಿಗೆ ಅಲ್ಲಿಂದ ನೀರು ಒದಗಿಸಲಾಗುತ್ತಿದೆ.

ಕಣ್ಮರೆಯಾಗಿರುವ ವಸ್ತುಗಳು ಇಲ್ಲಿ ಪ್ರತಕ್ಷ: ರಾಗಿ ಬೀಸುವ ಕಲ್ಲು, ಒನಕೆ, ಒಂದರಿ, ಲಟ್ಟಣಿಗೆ, ರೊಟ್ಟಿತಟ್ಟುವ ಮಣೆ ಸೇರಿದಂತೆ ಅಳಿನ ಅಂಚಿನಲ್ಲಿರುವ ವಸ್ತುಗಳು ಬೂಕನಬೆಟ್ಟದ ಜಾತ್ರೆಯಲ್ಲಿ ಪ್ರತ್ಯಕ್ಷವಾಗಿವೆ. ಗ್ರಾಮೀಣ ಭಾಗದ ಜನರಿಗೆ ಅಗತ್ಯ ವಸ್ತುಗಳಿಗಾಗಿ ಅಲೆದಾಟ ನಡೆಸುವ ಬದಲಾಗಿ ಬೂಕನ ಬೆಟ್ಟದ ತಪ್ಪಿಲಿನಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಬಹುದಾಗಿದೆ. ಕೃಷಿಕರು ಬಳಸುವ ವಸ್ತುಗಳಾದ ನೊಗ, ಕುಂಟೆ, ಮರದ ನೇಗಿಲು, ಮೊರ, ಹಲುಬೆ ಸೇರಿದಂತೆ ಕೃಷಿಗೆ ಬಳಸುವ ಮರ ಮುಟ್ಟುಗಳು ಇಲ್ಲಿ ದೊರೆಯುತ್ತಿವೆ.

ಶಾಮಿಯಾನದಲ್ಲಿ ಜೋಡೆತ್ತು: ಎರಡು ಲಕ್ಷ ರೂ. ಮೇಲ್ಪಟ್ಟಿರುವ ಜೋಡೆತ್ತುಗಳನ್ನು ಕಟ್ಟಿರುವ ರೈತರು ತಮ್ಮ ರಾಸುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ. ಬಿಸಿಲು ಬೀಳದಂತೆ ಶಾಮಿಯಾನ ವ್ಯವಸ್ಥೆ, ರಾಸುಗಳು ವಿಶ್ರಾಂತಿ ಪಡೆಯಲು ಮಲಗುವ ಸ್ಥಳದಲ್ಲಿ ರಾಗಿ ಹೊಟ್ಟನ್ನು ಹಾಸಿಗೆ ರೀತಿಯಲ್ಲಿ ಹಾಕಿದ್ದಾರೆ. ಬೆಳಗ್ಗೆ ರಾತ್ರಿ ಜೋಡೆತ್ತುಗಳನ್ನು ಭತ್ತದ ಹುಲ್ಲಿನಲ್ಲಿ ಮಸಾಜ್‌ ಮಾಡುವ ಮೂಲಕ ರಾಸುಗಳು ಸದಾ ಹೊಳೆಯುವಂತೆ ಮಾಡುತ್ತಿದ್ದಾರೆ.

ರಾಸುಗಳ ಜಾತ್ರೆಗಾಗಿ ತಾಲೂಕಿನ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂಲಕ ಸಮಸ್ಯೆ ಆಲಿಸಿದ್ದರಿಂದ ಜಾತ್ರೆಯಲ್ಲಿ ಸಮಸ್ಯೆಗಳು ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದೆ.
-ಸಿ.ಎನ್‌.ಬಾಲಕೃಷ್ಣ, ಶಾಸಕ

ರಾಸುಗಳ ಮಾರಾಟ ಹಾಗೂ ಖರೀದಿ ಮಾಡಲು ಪ್ರತಿ ವರ್ಷವೂ ಜಾತ್ರೆಗೆ ಆಗಮಿಸುತ್ತೇನೆ. ಉತ್ತಮ ತಳಿಯ ರಾಸುಗಳು ಸೇರುವುದರಿಂದ ಉತ್ತರ ಕರ್ನಾಟಕದ ರೈತರು ಈ ಜಾತ್ರೆಗೆ ಆಗಮಿಸುತ್ತಾರೆ.
-ಶಿವ, ಭಿಕ್ಷಾವರ್ತಿಮಠ ಬಾದಾಮಿ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next