ಬೆಂಗಳೂರು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಅರಜಿ ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಜಮೀನು ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಈ ಕುರಿತಂತೆ ಗೋಮಾಳ ಸಂರಕ್ಷಣಾ ಸಮಿತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ನ್ಯಾಯಪೀಠ, “ಈಗಾಗಲೇ ಗೋಮಾಳ ಎಂದು ಘೋಷಿಸಲಾಗಿರುವ ಅರಜಿ ಗ್ರಾಮದ 15 ಎಕರೆ 02 ಗುಂಟೆ ಜಮೀನನ್ನು ಅದಕ್ಕಾಗಿಯೇ ಕಾಯ್ದುಕೊಳ್ಳುವುದರ ಜೊತೆಗೆ ಒತ್ತುವರಿಯಾಗಿರುವ ಗೋಮಾಳ ಜಮೀನನ್ನು ತೆರವುಗೊಳಿಸಬೇಕು ಮತ್ತು ಗ್ರಾಮದ ಜಾನುವಾರಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಜಮೀನು ಕಾಯ್ದಿರಿಸಲು ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ ಒಟ್ಟು 89 ಎಕರೆ 06 ಗುಂಟೆ ಗೋಮಾಳ ಜಮೀನು ಎಂದು ದಾಖಲೆಗಳಲ್ಲಿದೆ. ಆದರೆ, ಇದರಲ್ಲಿ ಸಾಕಷ್ಟು ಜಾಗವನ್ನು ಒತ್ತುವರಿ ಮಾಡಲಾಗಿದೆ. ಹಾಗಾಗಿ, ಒಟ್ಟು ಜಮೀನನ್ನು ಗೋಮಾಳ ಎಂದು ಘೋಷಿಸಬೇಕೆಂದು ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಕೇವಲ 15 ಎಕರೆ 02 ಗುಂಟೆ ಮಾತ್ರ ಗೋಮಾಳ ಎಂದು ಘೋಷಿಸಿ 2017ರ ಜೂ.12ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಿಲ್ಲಾಧಿಕಾರಿಗಳ ಆದೇಶ ರದ್ದುಗೊಳಿಸಿದರೆ ಆ 15 ಎಕರೆ ಸಹ ಗೋಮಾಳ ಆಗಿ ಉಳಿಯುವುದು ಕಷ್ಟ. ಆದ್ದರಿಂದ ಈಗಾಗಲೇ ಘೋಷಿಸಲಾಗಿರುವ 15 ಎಕರೆ 02 ಗುಂಟೆ ಗೋಮಾಳ ಜಮೀನು ಅದೇ ರೀತಿಯಲ್ಲಿ ಕಾಯ್ದುಕೊಳ್ಳಬೇಕು. ಒತ್ತುವರಿ ತೆರವುಗೊಳಿಸಬೇಕು ಮತ್ತು ಗ್ರಾಮದ ಜಾನುವಾರಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳ ಮೀಸಲಿಡಬೇಕು ಎಂದು ಆದೇಶಿಸಿತು.